
ಕುಮಟಾದ ಗೋರೆಗುಡ್ಡದ ಮೇಲಿರುವ ಪುರಾತನ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.
ದೇವಾಲಯದ ಚಾವಣಿಯಿಂದ ಒಳಗೆ ಪ್ರವೇಶಿಸಿದ ಕಳ್ಳರು ದೇವಾಲಯದಲ್ಲಿದ್ದ ಹಣ ಹಾಗೂ ಚಿನ್ನದ ಸರವನ್ನು ದೋಚಿದ್ದಾರೆ. ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿ ಅಲ್ಲಿಯೂ ತಡಕಾಟ ನಡೆಸಿದ್ದಾರೆ. ದೇವರ ಹಣೆಗೆ ಹಚ್ಚಿದ್ದ ತಿಲಕವನ್ನು ಕದ್ದ ಅವರು ದೇವರಿಗೆ ತೊಡಿಸುವ ಬೆಳ್ಳಿ ಕಿರಿಟವನ್ನು ಮುಟ್ಟುವ ಧೈರ್ಯ ಮಾಡಿಲ್ಲ.
ದೇವಾಲಯದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಅದನ್ನು ಸಹ ಕಳ್ಳರು ಅಪಹರಿಸಿದ್ದಾರೆ. ದೇವಾಲಯದ ಅರ್ಚಕ ಶ್ರೀಧರ ಭಟ್ಟ ಪೂಜೆಗೆ ಆಗಮಿಸಿದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ದೇವಾಲಯದ ಬಳಿ ಅಪರಿಚಿತ ಬೈಕ್ ಪತ್ತೆಯಾಗಿದ್ದು, ಇದೇ ದರೋಡೆಗೆ ಆಗಮಿಸಿದವರದ್ದೇ ಆಗಿರಬೇಕು ಎಂದು ಶಂಕಿಸಲಾಗಿದೆ. ತೆಂಗಿನಕಾಯಿ ಒಡೆಯಲು ಇರಿಸಿದ್ದ ಕತ್ತಿಯಿಂದ ಕಪಾಟು ಒಡೆಯಲು ಪ್ರಯತ್ನಿಸಿದ್ದು, ಒಂದು ಕತ್ತಿ ಸಹ ಕಳ್ಳರ ಪಾಲಾಗಿದೆ.