
ಸಮುದ್ರದ ಅಲೆಗಳ ಏರಿಳತಕ್ಕೆ ನೀರು ನುಗ್ಗುವ `ಗಜನಿ ಭೂಮಿ\’ಯಲ್ಲಿಯಲ್ಲಿ ಕಾಲುಡುವುದೇ ಅಪಾಯ. ಅಂಥಹುದರಲ್ಲಿ ಹೆಸ್ಕಾಂ ಸಿಬ್ಬಂದಿ ಗೋಕರ್ಣದಿಂದ ಬರ್ಗಿವರೆಗೆ ಸಂಪರ್ಕ ಸಾಧಿಸುವ 11 ಕೆವಿ ಗಾತ್ರದ 2 ಕಂಬಗಳನ್ನು ಒಂದೇ ದಿನದಲ್ಲಿ ನಿಲ್ಲಿಸಿ ಸಾಹಸ ಮಾಡಿದ್ದಾರೆ.
ಒಬ್ಬರಂತೂ ಗಜನಿಯ ಭೂಮಿಯ ರಾಡಿಯಲ್ಲಿ ಕುತ್ತಿಗೆಯವರೆಗೆ ಮುಳುಗಿದ್ದರು. ಹಾವು – ಚೇಳುಗಳು ಅವರ ಸಮೀಪದಿಂದಲೇ ಓಡಾಡುತ್ತಿದ್ದವು. ಕುರಚಲು ಗಿಡದ ಮುಳ್ಳುಗಳು ಅವರ ಮೈ ತೆರಚುತ್ತಿದ್ದವು. ಆದರೂ, ಅವರಲ್ಲಿನ ಧೈರ್ಯ ಕಡಿಮೆಯಾಗಿರಲಿಲ್ಲ. ಅಗೆದಷ್ಟು ಆಳಕ್ಕೆ ಹೋಗುತ್ತಿದ್ದರೂ ತಮ್ಮ ಕೆಲಸದಲ್ಲಿನ ಶ್ರದ್ಧೆ ಕಡಿಮೆ ಆಗಿರಲಿಲ್ಲ. ಅಗೆದ ಹಾಗೇ ನೀರು ಬಂದರೂ ಬೇಸರಿಸಿಕೊಳ್ಳದೇ ಮತ್ತೆ ಮತ್ತೆ ಅಗೆಯುತ್ತಿದ್ದರು. ಮಾದನಗೇರಿಯ ಗಜನಿ ಪ್ರದೇಶದಲ್ಲಿ ಗಟ್ಟಿನೆಲ ಬರುವವರೆಗೂ ಅವರು ಮಣ್ಣಿನ ರಾಡಿ ತೆಗೆದರು. ನಂತರ ಗಟ್ಟಿಯಾದ ಭೂಮಿಯಲ್ಲಿಯೂ 1.5ಮೀ ಆಳ ಅಗೆದರು. ಹೆಸ್ಕಾಂ ನೌಕರ ವೆಂಕಟೇಶ್ ಗೌಡ ತಮ್ಮದೇ ತಂಡ ಕಟ್ಟಿಕೊಂಡು ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದರು.
ಆಳೆತ್ತರಕ್ಕೆ ಹೂಳು ತುಂಬಿದ್ದ ಅಲ್ಲಿ ಸ್ವಲ್ಪ ಆಯತಪ್ಪಿದ್ದರೂ ಅವರಾರೂ ಹೊರ ಬರುತ್ತಿರಲಿಲ್ಲ. ಸಾಕಷ್ಟು ಸಿದ್ಧತೆಯೊಂದಿಗೆ ಕೆಸರಿಗೆ ಇಳಿದ ಅವರು ಗಾಳಿ-ಮಳೆ ಲೆಕ್ಕಿಸದೇ ಜನರಿಗೆ ಬೆಳಕು ನೀಡಿದರು. ಗಟ್ಟಿನೆಲ ಬರುವವರೆಗೆ ರಾಡಿ ತೆಗೆದು, ಗಟ್ಟಿ ನೆಲದಲ್ಲಿ ಮತ್ತೆ ಅಗೆದು ಅದರ ಒಳಗೆ ಕಂಬ ನಿಲ್ಲಿಸುವ ಸಾಹಸ ದೊಡ್ಡ ಸಾಧನೆಯೇ ಸರಿ. ವಿದ್ಯುತ್ ಕಡಿತವಾದ 24 ಗಂಟೆಯ ಒಳಗಾಗಿ ಪ್ರತಿ ಮನೆಯಲ್ಲಿಯೂ ಬೆಳಕು ಮೂಡಿಸಬೇಕು ಎಂದು ಅವರು ಶಪಥ ಮಾಡಿದ್ದರು. ಅದನ್ನು ಸಾಧಿಸಿಯೂ ತೋರಿಸಿದರು. `ಈ ಹೆಸ್ಕಾಂ ಅಧಿಕಾರಿ-ಸಿಬ್ಬಂದಿಗೆ ಮಾಡಲು ಬೇರೆ ಕೆಲಸ ಇಲ್ಲ. ಪದೇ ಪದೇ ಕರೆಂಟ್ ತೆಗೆಯುತ್ತಾರೆ\’ ಎಂದು ದೂರುವವರೇ ಹೆಚ್ಚು. ಆದರೆ, 24*7 ಸಹಾಯವಾಣಿಗೆ ದಾಖಲಾದ ಯಾವ ದೂರನ್ನು ಅವರು ದೂರ ಮಾಡಿಲ್ಲ.