ಕಾರವಾರ ಕಡಲತಡಿಯ ಮೀನುಗಾರರ ಬದುಕು ಇನ್ನಷ್ಟು ಅತಂತ್ರವಾಗಿದೆ. ಅಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಿರುವವರನ್ನು ಸರ್ಕಾರ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿರುವುದು ಅವರ ಆತಂಕಕ್ಕೆ ಕಾರಣವಾಗಿದೆ.
ಗುಡಿಸಲು ತೆರವಿಗಾಗಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಖಾಸಗಿ ಮಾಲಿಕತ್ವದಲ್ಲಿರುವ `ಅಜ್ವಿ ಓಶಿಯನ್ ಹೊಟೇಲ್ ಹಾಗೂ ಜಿಲ್ಲಾಡಳಿತದ ತಾಬಾದಲ್ಲಿರುವ `ರಾಕ್ ಗಾರ್ಡನ್\’ ತೆರವುಗೊಳಿಸುವ ಬದಲು ಬಡ ಮೀನುಗಾರರ ಹೊಟ್ಟೆ ಮೇಲೆ ಹೊಡೆಯುತ್ತಿರುವುದಕ್ಕೆ ಜನ ಕಿಡಿಕಾರಿದ್ದಾರೆ. `ಮೀನುಗಾರರು ಅಲ್ಲಿ ವಾಸಿಸುತ್ತಿಲ್ಲ. ಇಲ್ಲಿ ದೋಣಿ ಹಾಗೂ ಬಲೆಗಳನ್ನು ಮಾತ್ರ ಇಡುತ್ತಿದ್ದು, ಅದನ್ನು ತೆರವು ಮಾಡುವುದು ಸರಿಯಲ್ಲ\’ ಎಂದು ಮೀನುಗಾರರು ಅಳಲು ತೋಡಿಕೊಂಡಿದ್ದಾರೆ.
ಜಿಲ್ಲಾ ಸಹಕಾರಿ ಮೀನು ಮಾರಾಟಗಾರ ಪೆಡರೇಶನ್ನ ಅಧ್ಯಕ್ಷ ರಾಜು ತಾಂಡೇಲ ಈ ಬಗ್ಗೆ ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದು, ಬಳಿಕ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ನಿಶ್ಚನ ನರೋನಾ `ಅಧಿಕಾರಿಗಳ ಕಣ್ತಪ್ಪಿನಿಂದ ಇಲ್ಲಿನ ಮೀನುಗಾರರಿಗೆ ನೋಟಿಸ್ ನೀಡಲಾಗಿದೆ. 2016 ರಲ್ಲಿ ಚಾಪಲ್ ನೌಕೆ ಬಳಿ ಇದ್ದ ಗುಡಿಸಲಗಳಿಗೆ ನೋಟೀಸ್ ನೀಡಲು ತಿಳಿಸಲಾಗಿದ್ದು, ಇದೀಗ ಅಲ್ಲಿ ಯಾವ ಗುಡಿಸಲು ಇಲ್ಲ. ಆದರೆ, ನಿಯಮದಂತೆ ಅಧಿಕಾರಿಗಳು ನೋಟಿಸ್ ನೀಡಲು ಬಂದಾಗ ಇಲ್ಲಿ ಗುಡಿಸಲು ಕಂಡು ನೋಟಿಸ್ ಅಂಟಿಸಿದ್ದಾರೆ\’ ಎಂದು ಸಮಾಧಾನ ಮಾಡಿದ್ದಾರೆ.