ಶಿರೂರು ಗುಡ್ಡ ಕುಸಿತದಿಂದ ಸಾವು-ನೋವು ಅನುಭವಿಸಿದವರಿಗಿಂತಲೂ ಗಂಗಾವಳಿ ನದಿ ಪಾಲಾದ ಲಾರಿ ಹುಡುಕಾಟಕ್ಕಾಗಿ ವಿಶೇಷ ಆಸಕ್ತಿವಹಿಸಿರುವದರಿಂದ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿದೆ. ಆದರೆ, ಈ ಊಹಾಪೋಹಗಳಿಗೆ ಪೂರಕವಾದ ಅಧಿಕೃತ ಸಾಕ್ಷಿ-ಪುರಾವೆಗಳು ಯಾರಲ್ಲಿಯೂ ಇಲ್ಲ!
ದುರಂತಕ್ಕೆ ಸಿಲುಕಿದ ಅರ್ಜುನನ ಲಾರಿಯಲ್ಲಿ ಮರದ ನಾಟಾ ಹೊರತುಪಡಿಸಿ ಸರ್ಕಾರವನ್ನು ನಡುಗಿಸಬಹುದಾದ ಇನ್ಯಾವುದೋ ವಸ್ತು ಇದ್ದ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿಯೇ ಮಂಜೇಶ್ವರದ ಶಾಸಕ ಅಶ್ರಫ್ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಸ್ಥಳದಲ್ಲಿದ್ದು, ಸರ್ಕಾರ ಉಳಿಸಿಕೊಳ್ಳುವ ಸಾಹಸ ನಡೆಸಿರುವ ಮಾತುಗಳು ಕೇಳಿಬಂದಿದೆ. `ಅರ್ಜುನ ಬದುಕಿರುವ ಸಾಧ್ಯತೆ ಹಿನ್ನಲೆ ವಿಶೇಷ ಮುತುವರ್ಜಿವಹಿಸಿ ಲಾರಿ ಹುಡುಕಾಟ ನಡೆಸಲಾಗಿದೆ. `ನಮಗೆ ಲಾರಿಗಿಂತಲೂ ಅರ್ಜುನನ ಜೀವ ಮುಖ್ಯ\’ ಎಂದು ಶಾಸಕ ಸತೀಶ್ ಸೈಲ್ ಹೇಳಿಕೆ ನೀಡಿದ್ದಾರೆ. ಲಾರಿ ಬಗ್ಗೆ ವಿಶೇಷ ಕಾಳಜಿವಹಿಸಿರುವ ಬಗ್ಗೆ ಯಾರೂ ಪ್ರಶ್ನಿಸದೇ ಇದ್ದರೂ ಶಾಸಕರೇ ಈ ಬಗ್ಗೆ ಒತ್ತಿ ಹೇಳಿರುವುದು ಜನರ ಅನುಮಾನಗಳಿಗೆ ಇನ್ನೊಂದು ಕಾರಣ.
`ಅರ್ಜುನ್ ಯಾರು ಎಂದು ನನಗೆ ಗೊತ್ತಿಲ್ಲ. ನನ್ನ ಕ್ಷೇತ್ರದ ಮತದಾರನೂ ಅಲ್ಲ. ಆತ ಕಾಸರಗೋಡಿನ ಜನನೂ ಅಲ್ಲ. ಆತ ಕಲ್ಲಿಕೋಟೆಯವನು. ಆದರೂ, ಜನರ ನೋವಿಗೆ ಸ್ಪಂದಿಸುವುದು ಕೇರಳದ ಸಂಸ್ಕೃತಿ ಎಂದು ನಾನು ಬಂದಿದ್ದೇನೆ\’ ಎಂದು ಮಂಜೇಶ್ವರ ಶಾಸಕ ಅಶ್ರಫ್ ಹೇಳಿದ್ದಾರೆ. `ಅರ್ಜುನ್ ಎಂಬಾತ ಒಬ್ಬ ಮನುಷ್ಯ ಅಲ್ಲ, ಆತನೊಬ್ಬ ದೊಡ್ಡ ಲಾರಿ. ಅದರಲ್ಲಿ 300 ದಿಮ್ಮಿಗಳಿರುವುದು. ಇಷ್ಟೊಂದು ಕಷ್ಟಪಟ್ಟರೂ ದಿಮ್ಮಿ ಸಹ ಸಿಗದಿರುವುದು ಪ್ರಶ್ನೆಯಾಗಿತ್ತು. ಇದೀಗ ಟ್ರಕ್ ಸಿಕ್ಕಿದ್ದು, ಅದನ್ನು ಮೇಲೆತ್ತುವುದು ಸಾಹಸ. ಇದಕ್ಕಿಂತ ಕಠಿಣ ಸಮಸ್ಯೆ ಎದುರಿಸಿದ ತಂಡದವರು ಅಲ್ಲಿದ್ದರಿಂದ ಇದನ್ನು ಮೇಲೆತ್ತುವುದುದು ಅಸಾಧ್ಯವಲ್ಲ\’ ಎಂದೂ ಹೇಳಿದ್ದಾರೆ. `ಎಲ್ಲಾ ಸಿಕ್ಕದ ಮೇಲೆ ದೆಹಲಿಯಿಂದ ತಂಡ ಬಂದು ಪ್ರಯೋಜನವಿಲ್ಲ. ಮುಂಚಿತವಾಗಿ ಬರಬೇಕಿತ್ತು\’ ಎಂದು ಅವರು ಕೇಂದ್ರ ತಂಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಲಾರಿ ರಹಸ್ಯದ ಬಗ್ಗೆ ಅರಿತಿರುವ ಕೇಂದ್ರದ ನಾಯಕರು ಆ ರಹಸ್ಯವನ್ನು ಬೇಧಿಸುವುದಕ್ಕಾಗಿ ಮಿಲಟರಿಯವರ ಸಹಾಯ ಪಡೆದಿರುವ ಬಗ್ಗೆಯೂ ಕೆಲವರು ಮಾತನಾಡಿದ್ದಾರೆ. ಈ ಬಗ್ಗೆ ಪರಿಶೀಲಿಸಲು ದೆಹಲಿಯ ಎಜನ್ಸಿ ಆಗಮಿಸುತ್ತಿದೆ ಎಂಬ ಮಾತೂ ಇದೆ. ಈ ನಡುವೆ `ಆ ಲಾರಿ ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ಅದನ್ನು ಅಧಿಕಾರಿಗಳೇ ಖಚಿತಪಡಿಸಬೇಕು\’ ಎಂದು ಲಾರಿ ಮಾಲಕ ಅಡ್ಡಗೋಡೆ ಮೇಲೆ ದೀಪ ಇಟ್ಟ ರೀತಿ ಹೇಳಿಕೆ ನೀಡಿದ್ದಾರೆ. `ಕಣ್ಮರೆಯಾದ ಲೋಕೇಶನ ಬಗ್ಗೆ ಯಾರೂ ಈ ಪ್ರಮಾಣದಲ್ಲಿ ಆಸಕ್ತಿವಹಿಸಿಲ್ಲ. ಮಗನ ಹುಡುಕಾಟದಲ್ಲಿರುವ ತಾಯಿ ಅಳಲು ಆಲಿಸಲು ಯಾವ ಜನಪ್ರತಿನಿಧಿಯೂ ಹೋಗಿಲ್ಲ\’ ಎಂಬುದು ಜನರ ದೂರು.
ಲಾರಿ ರಹಸ್ಯದ ಬಗ್ಗೆ ಒಬ್ಬೊಬ್ಬರು ಒಂದೊoದು ರೀತಿಯಲ್ಲಿ ಮಾತನಾಡುತ್ತಿದ್ದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಅವರಿವರಿಂದ ಕೇಳಲ್ಪಟ್ಟ ಮಾತುಗಳೆಲ್ಲವೂ ಈವರೆಗಿನ ಮಾಹಿತಿ ಪ್ರಕಾರ ಸತ್ಯವಲ್ಲ!