ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಎಲ್ಲಡೆ ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ.
ಹೀಗಾಗಿ `ಮಕ್ಕಳು ಶಾಲೆಗೆ ಬರುವುದು ಕಷ್ಟ\’ ಎಂದು ಶಿಕ್ಷಣಾಧಿಕಾರಿಗಳು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದಾರೆ. ಕಂದಾಯ ಅಧಿಕಾರಿಗಳು ಸಹ ವಿವಿಧ ಕಡೆ ಹಾನಿ ಆಗಿರುವ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದ್ದು, ಅಲ್ಲಲ್ಲಿ ಶಾಲೆಗಳಿಗೆ ಸಹ ಮಳೆ ತೊಂದರೆ ನೀಡಿದೆ. ಜುಲೈ 26ರ ಮಧ್ಯಾಹ್ನದಿಂದ ಜುಲೈ 28ರ ಬೆಳಗ್ಗೆ 8.30ರವರೆಗೂ ವ್ಯಾಪಕ ಮಳೆ ಆಗುವ ಬಗ್ಗೆ ಹವಾಮಾನ ಇಲಾಖೆ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಿದೆ. ಈ ಅವಧಿಯನ್ನು `ಆರೆಂಜ್ ಅಲರ್ಟ\’ ಎಂದು ಘೋಷಿಸಲಾಗಿದೆ. ಈ ಹಿನ್ನಲೆಯಲ್ಲಿ ಜುಲೈ 27ರ ಶನಿವಾರ ಜಿಲ್ಲೆಯ 10 ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶಿಸಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೊಯಿಡಾ, ಯಲ್ಲಾಪುರ, ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಿಗೆ ರಜೆ ಘೋಷಿಸಲಾಗಿದೆ. ಶಿಕ್ಷಣಾಧಿಕಾರಿಗಳ ವರದಿ ಪಡೆದು ಮಳೆ ವ್ಯಾಪಕ ಪ್ರಮಾಣದಲ್ಲಿರುವ ತಾಲೂಕುಗಳಲ್ಲಿ ಮಕ್ಕಳಿಗೆ ಶಾಲೆಗೆ ಬರಲು ಸಮಸ್ಯೆ ಆಗುವುದನ್ನು ಅರಿತು ಜಿಲ್ಲಾಡಳಿತ ಈ ರಜೆ ಘೋಷಿಸಿದೆ. ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಐಟಿಐ ಹಾಗೂ ಡಿಪ್ಲೋಮಾ ಕಾಲೇಜುಗಳಿಗೂ ರಜೆ ಅನ್ವಯ.
ಹಳಿಯಾಳ ಹಾಗೂ ಮುಂಡಗೋಡಿನ ಶಾಲೆಗಳಿಗೆ ಮಳೆ ರಜೆ ಇಲ್ಲ.