ಕುಮಟಾ: ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರಥಮದರ್ಜೆ ಸಹಾಯಕನಾಗಿ ಕೆಲಸ ಮಾಡುವ ಎನ್ ಎಸ್ ಅಮರ ಸುಬ್ರಾಯ ನಾಯಕ ಎಂಬಾತ ವಿವೇಕನಗರ ಮಾಲಶ್ರೀ ಪ್ರಕಾಶ್ ರಾತೋಡ್ ಎಂಬಾತರಿಗೆ ಜಮೀನು ಮಾರಾಟ ಮಾಡುವುದಾಗಿ ನಂಬಿಸಿ 22.20 ಲಕ್ಷ ರೂ ವಂಚನೆ ಮಾಡಿದ್ದು, ಈ ಹಣ ಮರಳಿಸುವಂತೆ ಒತ್ತಾಯಿಸಿದಾಗ ಜಾತಿ ನಿಂದಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಸಂತ್ರಸ್ತೆ ದೂರಿದ್ದಾರೆ.
ಅಂಕೋಲಾದ ಪುರಮಕ್ಕಿ ಬೇಣದ ನಿವಾಸಿಯಾಗಿರುವ ಎನ್ ಎಸ್ ಅಮರ ಸುಬ್ರಾಯ ನಾಯಕ ಜುಲೈ 20ರಂದು ಸಂಜೆ 5.30ಕ್ಕೆ ಕುಮಟಾ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ತನ್ನದೇ 5 ಗುಂಟೆ ಭೂಮಿ ಕೊಡುವುದಾಗಿ ತಿಳಿಸಿದ್ದ. ಇದಕ್ಕಾಗಿ 2220000ರೂ ಹಣವನ್ನು ಪಡೆದಿದ್ದ. ಆದರೆ, ನಂತರ ಭೂಮಿ ಕೊಡದೇ ಹಣವನ್ನು ಹಿಂತಿರುಗಿಸಲು ನಿರಾಕರಿಸಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿ ಮಹಿಳೆಯನ್ನು ಉದ್ದೇಶಿಸಿ `ನೀನು ಕುಲಗೆಟ್ಟ ಜಾತಿಯವಳು\’ ಎಂದು ನಿಂದಿಸಿದ್ದಲ್ಲದೇ, `ನಿನ್ನನ್ನು ನಿನ್ನ ಕುಟುಂಬದವರನ್ನು ಇಲ್ಲದಂತೆ ಮಾಡುವುದು ದೊಡ್ಡ ವಿಷಯವಲ್ಲ\’ ಎಂದು ಹೇಳಿದ್ದಾನೆ. ಜೊತೆಗೆ `ಕುಮಟಾದಲ್ಲಿ ಹೇಗೆ ಜೀವಂತವಾಗಿರುವೆ? ನೋಡುತ್ತೇನೆ\’ ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಾರೆ.