ಉತ್ತರ ಕನ್ನಡ ಜಿಲ್ಲೆಯ ದೊಡ್ಡ ವಾಣಿಜ್ಯ ಮಳಿಗೆಗಳಲ್ಲಿ ಒಂದಾದ ಮಿಲನ್ ಎಂಟರ್ ಪ್ರೈಸಸ್ ತಮ್ಮ ಮಳಿಗೆಯ ಭದ್ರತೆಗೆ ಯೋಗ್ಯ ಕಾವಲುಗಾರರ ನೇಮಕ ಮಾಡಿಲ್ಲ. ಅಲ್ಲಿ ಸಿಸಿ ಕ್ಯಾಮರಾದ ಕಣ್ಗಾವಲು ಸಹ ಸರಿಯಾಗಿಲ್ಲ!
ಮಿಲನ್ ಎಂಟರ್ ಪ್ರೈಸಸ್ ಮಳಿಗೆಯಲ್ಲಿನ ನ್ಯೂನ್ಯತೆ ಅರಿತ ಕಳ್ಳರು ಕಾರವಾರದಲ್ಲಿ ಕಳ್ಳತನ ಮಾಡಿದ್ದಾರೆ. ಕಿಟಕಿ ಮೂಲಕ ಮಳಿಗೆ ಒಳಗೆ ಪ್ರವೇಶಿಸಿ ಅಲ್ಲಿದ್ದ ಹಣ ಎಗರಿಸಿದ್ದಾರೆ. ಕಳ್ಳತನ ನಡೆದು 10 ದಿನಗಳ ನಂತರ ಮಿಲನ್ ಎಂಟರ್ ಪ್ರೈಸಸ್ ಮ್ಯಾನೇಜರ್ `ಕಳ್ಳರನ್ನು ಹುಡುಕಿಕೊಡಿ’ ಎಂದು ಪೊಲೀಸರ ಮೊರೆ ಹೋಗಿದ್ದಾರೆ.
ಕುಮಟಾ ಹಿರೆಗುತ್ತಿಯ ರಂಜನ ನಾಯಕ ಅವರು ಕಾರವಾರದ ಲಿಂಗನನಾಯ್ಕವಾಡದಲ್ಲಿ ವಾಸವಾಗಿದ್ದಾರೆ. ಅವರು ಮಿಲನ್ ಎಂಟರ್ ಪ್ರೈಸಸ್’ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳ್ಳತನ ನಡೆದ ತರುವಾಯ ಅವರು ಅಲ್ಲಿನ ಸಿಬ್ಬಂದಿ ಮೇಲೆ ಅನುಮಾನಪಟ್ಟಿದ್ದು, ಅವರೆಲ್ಲರ ವಿಚಾರಣೆ ನಡೆಸಿದ್ದಾರೆ. ಅದಾದ ನಂತರ `ಮಳಿಗೆಯ ಎಲ್ಲಾ ಸಿಬ್ಬಂದಿ ವಿಚಾರಣೆ ನಡೆಸಿದರೂ ಕಳ್ಳನ ಬಗ್ಗೆ ಕುರುಹು ಸಿಗದ ಕಾರಣ ದೂರು ನೀಡಲು ತಡವಾಗಿದೆ’ ಎಂದು ಮಿಲನ್ ಎಂಟರ್ ಪ್ರೈಸಸ್ ಮ್ಯಾನೇಜರ್ ರಂಜನ ನಾಯಕ ಅವರು ಪೊಲೀಸರ ಬಳಿ ಹೇಳಿದ್ದಾರೆ.
ಜೂನ್ 15ರ ರಾತ್ರಿ ಕಾರವಾರದ ಮುಲ್ಲಾ ಸ್ಟಾಪ್ ಬಳಿಯಿರುವ ಮಿಲನ್ ಎಂಟರ್ ಪ್ರೈಸಸ್’ನ ಕಿಟಕಿಯಿಂದ ಕಳ್ಳರು ಒಳಗೆ ನುಗ್ಗಿರುವುದು ಗೊತ್ತಾಗಿದೆ. ಮಳಿಗೆಯಲ್ಲಿದ್ದ 33 ಸಾವಿರ ರೂ ಹಣ ದೋಚಿ ಪರಾರಿಯಾಗಿರುವುದು ಮರುದಿನ ಅರಿವಿಗೆ ಬಂದಿದೆ. ಆ ಅವಧಿಯಲ್ಲಿ ರಂಜನ ನಾಯಕ ಅವರ ಆರೋಗ್ಯವೂ ಸರಿಯಿಲ್ಲದ ಕಾರಣ ವಿಚಾರಣೆ ವೇಗಪಡೆದಿರಲಿಲ್ಲ. ಕೊನೆಗೂ ಕಳ್ಳರ ಪತ್ತೆ ಆಗದ ಕಾರಣ ಅವರು ಪೊಲೀಸ್ ದೂರು ನೀಡಿದ್ದು, ಪೊಲೀಸರು ಸಾಕ್ಷಿ ಹುಡುಕಾಟ ನಡೆಸಿದ್ದಾರೆ.
