ಕುಮಟಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ನೀರು ಅಪ್ಪಳಿಸಿ ಏಳು ಮನೆಗಳು ಸಂಪೂರ್ಣ ಕೊಚ್ಚಿಕೊಂಡು ಹೋಗಿದ್ದು, ಸಂತ್ರಸ್ತ ಕುಟುಂಬಗಳಿಗೆ ರಾಮಚಂದ್ರಾಪುರ ಮಠ ನೆರವು ನೀಡಿದೆ.
ಮಠದ ಪರವಾಗಿ ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಸ್ಥಳಕ್ಕೆ ಭೇಟಿ ನೀಡಿದ ಮಠದವರು ಸಂತ್ರಸ್ತರಿಗೆ ಸಾಂತ್ವನ ಹೇಳಿ, ನಗದು, ಆಹಾರಧಾನ್ಯದ ಕಿಟ್ಗಳನ್ನು ವಿತರಿಸಿದರು. ನಂತರ ಕಾಳಜಿ ಕೇಂದ್ರಕ್ಕೆ ತೆರಳಿ ಅಲ್ಲಿದ್ದವರ ಅಗತ್ಯಕ್ಕೆ ದಿನಸಿ ವಿತರಿಸಿದರು.
ನೊಂದ ಪ್ರತಿ ಕುಟುಂಬಗಳಿಗೆ ತಕ್ಷಣಕ್ಕೆ 5 ಸಾವಿರ ರೂಪಾಯಿ ನಗದು, ಅಕ್ಕಿ, ತರಕಾರಿ, ಸಕ್ಕರೆ, ತೊಗರಿಬೇಳೆ, ತೆಂಗಿನಕಾಯಿ, ಶ್ರೀಗಳ ಮಂತ್ರಾಕ್ಷತೆ, ರಾಮದೇವರ ಪ್ರಸಾದವನ್ನು ನೀಡಲಾಯಿತು. ಶ್ರೀಮಠದ ನೆರವು ಸ್ವೀಕರಿಸಿದ ಮಂಜುನಾಥ ಹನುಮಂತ ಗೌಡ, ನೀಲಾ ಮುದ್ದುಗೌಡ, ಬೊಮ್ಮ ಅನಂತ ಗೌಡ, ಗಣಪತಿ ಬೊಮ್ಮ ಗೌಡ, ದಾದಾ ತೊಳಸಪ್ಪ ಗೌಡ, ಗೋವಿಂದ ಕೃಷ್ಣ ಗೌಡ, ಮಾದೇಶ ಮೋಹನ ಅಂಬಿಗ ಕೃತಜ್ಞತೆ ಸಲ್ಲಿಸಿದರು.