ಕಾರವಾರದ ಬಝಾರ್ ಶಾಲೆಯಲ್ಲಿ ಬಡಿಸಿದ ಊಟದಲ್ಲಿ ಹುಳ ಕಾಣಿಸಿಕೊಂಡ ಹಿನ್ನಲೆ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಯಸಕ್ಕೆ ಬಳಸಿದ ರವೆ ಈ ವೇಳೆ ಕಣ್ಮರೆಯಾಗಿದ್ದು, ಅದಕ್ಕೆ ಉತ್ತರಿಸಲು ಅಡುಗೆ ಸಿಬ್ಬಂದಿ ತಡವರಿಸಿದ್ದಾರೆ. ನ್ಯಾಯಾಧೀಶರ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಬೇಕಿದ್ದ ಮುಖ್ಯಾಧ್ಯಾಪಕರು ಅಲ್ಲಿರಲಿಲ್ಲ.
ಶುಕ್ರವಾರ ಮಧ್ಯಾಹ್ನ ಊಟ ಮಾಡುತ್ತಿದ್ದ ಮಕ್ಕಳಿಗೆ ಪಾಯಸದಲ್ಲಿ ಹುಳ ಕಾಣಿಸಿಕೊಂಡಿತ್ತು. ಅದನ್ನು ಮಕ್ಕಳು ಶಿಕ್ಷಕರ ಗಮನಕ್ಕೆ ತಂದಿದ್ದು, ಅವರಿವರ ಮೂಲಕ ಈ ವಿಷಯ ನ್ಯಾಯಾಧೀಶರ ಗಮನಕ್ಕೆ ಹೋಯಿತು. ಹೀಗಾಗಿ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ಅಡುಗೆ ತಯಾರಿಸಲು ಬಳಸುವ ಕಿರಾಣಿ ಸಾಮಾನುಗಳ ವಾಯಿದೆಯನ್ನು ನ್ಯಾಯಾಧೀಶರು ಪರಿಶೀಲಿಸಿದರು. ದಾಸ್ತಾನು ಮಾಡಲಾದ ಅಕ್ಕಿ-ಬೆಳೆ-ಕಾಳುಗಳನ್ನು ಗಮನಿಸಿದರು. ಪಾಯಸ ಮಾಡಿದ ರವೆ ಹುಡುಕಾಟ ನಡೆಸಿದಾಗ ಅದು ಕಾಣಲಿಲ್ಲ. ಹೀಗಾಗಿ ಅಡುಗೆ ಸಿಬ್ಬಂದಿಯನ್ನು ಅವರು ವಿಚಾರಿಸಿದರು. ಆದರೆ, ಅದಕ್ಕೆ ಉತ್ತರಿಸಲು ಅಡುಗೆ ಸಿಬ್ಬಂದಿ ತಡವರಿಸಿದರು.
ಅಡುಗೆ ಸಿಬ್ಬಂದಿಯ ಮೇಲ್ವಿಚಾರಣೆ ನೋಡಿಕೊಳ್ಳುವ ಶಿಕ್ಷಕರನ್ನು ನ್ಯಾಯಾಧೀಶೆ ದಿವ್ಯಶ್ರೀ ಎಂ ಅವರು ತರಾಠೆಗೆ ತೆಗೆದುಕೊಂಡರು. `ನಿಮ್ಮ ಮನೆ ಮಕ್ಕಳಿಗೆ ಇದೇ ರೀತಿ ಊಟ ಬಡಿಸುತ್ತೀರಾ? ಪಾಯಸ ಮಾಡುವ ಮೊದಲು ರವೆ ಪರಿಶೀಲಿಸಿಲ್ಲವೇ?’ ಎಂದು ಪ್ರಶ್ನಿಸಿದರು. `ನೂರಾರು ಮಕ್ಕಳು ಓದುವ ಶಾಲೆಯಲ್ಲಿ ಇಂಥ ನಿರ್ಲಕ್ಷö್ಯ ಸರಿಯಲ್ಲ’ ಎಂದು ಹೇಳಿದರು.
`ಅಡುಗೆ ಸಿಬ್ಬಂದಿ ವಿರುದ್ಧ ಸಾಕಷ್ಟು ದೂರುಗಳಿವೆ. ಅವರು ಸಮಯಕ್ಕೆ ಸರಿಯಾಗಿ ಶಾಲೆಗೆ ಬರುವ ಬಗ್ಗೆ ನನಗೆ ನಿತ್ಯ ಮಾಹಿತಿ ಕೊಡಬೇಕು’ ಎಂದು ನ್ಯಾಯಾಧೀಶರು ತಾಕೀತು ಮಾಡಿದರು. ಮತ್ತೆ ಇಂಥ ನಿಷ್ಕಾಳಜಿವಹಿಸಿದರೆ ಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
