ಕಾಲೇಜಿಗೆ ಹೋಗಿ ಬರುವುದಾಗಿ ಹುಬ್ಬಳ್ಳಿಗೆ ಹೋಗಿದ್ದ ಮುಂಡಗೋಡಿನ ವಿದ್ಯಾರ್ಥಿ ನಿಗೂಢವಾಗಿ ಕಾಣೆಯಾಗಿದ್ದು, ಒಂದು ವರ್ಷದ ನಂತರ ಮನೆಗೆ ಮರಳಿದ ವಿಚಿತ್ರ ವಿದ್ಯಮಾನ ನಡೆದಿದೆ.
ಮುಂಡಗೋಡು ಅಂದಲಗಿಯ ಪ್ರೀತಂ ಪವಾರ್ (18) ಅವರು 2024ರ ಮೇ 21ರಂದು ಮನೆಯಿಂದ ಹೊರಟಿದ್ದರು. `ಹುಬ್ಬಳ್ಳಿಗೆ ಹೋಗಿ ಕಾಲೇಜು ಅಡ್ಮಿಶನ್ ಮಾಡಿ ಬರುವೆ’ ಎಂದವರು ಮನೆಯಲ್ಲಿ ಹೇಳಿದ್ದರು. ಆದರೆ, ಮರಳಿ ಮನೆಗೆ ಮಾತ್ರ ಬಂದಿರಲಿಲ್ಲ. ಪ್ರೀತಂ ಪವಾರ್ ಅವರಿಗಾಗಿ ಸಾಕಷ್ಟು ಹುಡುಕಾಟ ನಡೆಸಿದರೂ ಅವರ ಸುಳಿವು ಸಿಕ್ಕಿರಲಿಲ್ಲ.
ಈ ಬಗ್ಗೆ ಉತ್ತರ ಕನ್ನಡ ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರ ಗಮನಕ್ಕೆ ಬಂದಿದ್ದು, ತಮ್ಮ ಪ್ರಭಾವ ಬೀರಿ ಅವರು ಪ್ರೀತಂ ಪವಾರ್ ಅವರ ಹುಡುಕಾಟ ನಡೆಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಬಿ, ಜಗದೀಶ ನಾಯ್ಕ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಅವರು ಕಾಣೆಯಾದ ವಿದ್ಯಾರ್ಥಿ ಹುಡುಕಾಟಕ್ಕೆ ಶ್ರಮಿಸಿದರು. ಮುಂಡಗೋಡ ಪೊಲೀಸ್ ಠಾಣೆಯ ಸಿಪಿಐ ರಂಗನಾಥ ನೀಲಮ್ಮನವರ ಹಾಗೂ ಪಿಎಸ್ಐ ಪರಶುರಾಮ ಮಿರ್ಜಗಿ, ವಿನೋದ ಎಸ್ ಕೆ ಸೇರಿ ಕಾರ್ಯಾಚರಣೆಗಿಳಿದರು.
ಪೊಲೀಸ್ ಸಿಬ್ಬಂದಿ ಮಂಜಪ್ಪ ಚಿಂಚಿಲಿ, ಬಸವರಾಜ ಲಂಬಾಣಿ ಹಾಗೂ ಸಂಜು ರಾಠೋಡ ಕೊನೆಗೂ ಪ್ರೀತಂ ಪವಾರ್ ಅವರನ್ನು ಪತ್ತೆ ಮಾಡಿದರು. ಪ್ರೀತಂ ಪವಾರ್ ಹುಬ್ಬಳ್ಳಿಯಲ್ಲಿಯೇ ಸಿಕ್ಕಿದ್ದು, ಅವರನ್ನು ಕುಟುಂಬದವರಿಗೆ ಒಪ್ಪಿಸುವ ಕಾರ್ಯ ನಡೆದಿದೆ.
