ಸಾಕಷ್ಟು ಜನ ವಿರೋಧದ ನಡುವೆಯೂ ಉತ್ತರ ಕನ್ನಡ ಜಿಲ್ಲೆಯ ಅನೇಕ ತಾಲೂಕಿನ ವೈದ್ಯರ ವರ್ಗಾವಣೆ ನಡೆದಿದೆ. ಒಲ್ಲದ ಮನಸ್ಸಿನಿಂದಲೇ ವೈದ್ಯರು ಸಹ ಊರು ತೊರೆಯುವ ಸಿದ್ಧತೆ ಮಾಡಿಕೊಂಡಿದ್ದಾರೆ.
ಸಾಕಷ್ಟು ಜನಮನ್ನಣೆಗಳಿಸಿದ ಕೆಲ ವೈದ್ಯರು ವರ್ಗಾವಣೆಯಿಂದ ಬೇಸತ್ತು ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ರಾಜೀನಾಮೆಗೆ ಧೈರ್ಯ ಸಾಲದ ವೈದ್ಯರಿಗೆ ಸರ್ಕಾರ ಸುಮೋಟೋ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದು, ಇದರಿಂದ ಅನಿವಾರ್ಯವಾಗಿ ಅವರು ಕ್ಷೇತ್ರ ತೊರೆಯುತ್ತಿದ್ದಾರೆ. ಜನರ ಜೊತೆ ಭಾವನಾತ್ಮಕವಾಗಿ ಬೆರೆತಿದ್ದ ವೈದ್ಯರ ಭೇಟಿಗೆ ನಿತ್ಯ ನೂರಾರು ರೋಗಿಗಳು ಬರುತ್ತಿದ್ದಾರೆ. ವರ್ಗಾವಣೆ ಬೇಸರದಲ್ಲಿರುವ ವೈದ್ಯರಿಗೆ ರೋಗಿಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಸಾಧ್ಯವಾಗುತ್ತಿಲ್ಲ.
ಜಿಲ್ಲೆಯ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ಯಾವುದೇ ಹೆಚ್ಚುವರಿ ನಿರೀಕ್ಷೆಯಿಲ್ಲದೇ ಜನ ಸೇವೆ ಮಾಡುತ್ತಿರುವ ಅನೇಕ ವೈದ್ಯರಿದ್ದಾರೆ. ಅಲ್ಲಿ ಕೆಲಸ ಮಾಡುವ ಇತರೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದರೂ ರೋಗಿಗಳನ್ನು ಸಮಾಧಾನದಿಂದ ಮಾತನಾಡಿಸಿ ಸಿಬ್ಬಂದಿಯನ್ನು ಸರಿದಾರಿಗೆ ತಂದ ಚಾಣಾಕ್ಷ ವೈದ್ಯರಿದ್ದಾರೆ. ಅನೇಕ ವರ್ಷಗಳಿಂದ ಅವರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದು ಸತ್ಯವೇ ಆಗಿದ್ದರೂ ಅವರು ಅನಗತ್ಯವಾಗಿ ಯಾರಿಗೂ ತೊಂದರೆ ಕೊಟ್ಟವರಲ್ಲ. ಸಣ್ಣಪುಟ್ಟ ಹೊಟ್ಟೆಕಿಚ್ಚಿನ ಮಾತುಗಳನ್ನುಹೊರತುಪಡಿಸಿ ಅಂಥವರ ವಿರುದ್ಧ ಯಾವುದೇ ಗಂಭೀರ ಆರೋಪಗಳಿಲ್ಲ. ಜನರ ಪ್ರೀತಿಗಳಿಸಿದ ವೈದ್ಯರು ಭ್ರಷ್ಟರಾಗಿಲ್ಲ. ಹೀಗಾಗಿ ಅವರಿಂದ ಕಾಸು ಕೊಟ್ಟು ವರ್ಗಾವಣೆ ರದ್ಧು ಮಾಡಿಸಿಕೊಳ್ಳಲು ಸಹ ಸಾಧ್ಯವಾಗಿಲ್ಲ.
ಜನರ ಜೊತೆ ಭಾವನಾತ್ಮಕವಾಗಿ ಬೆರೆತ ವೈದ್ಯರ ವರ್ಗಾವಣೆ ವಿರೋಧಿಸಿ ಜನ ಬೀದಿಗಿಳಿದಿದ್ದಾರೆ. ಅನೇಕ ಕಡೆ ಪ್ರತಿಭಟನೆ ನಡೆದಿದೆ. ಪತ್ರಗಳ ಮೂಲಕ ಜನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳು ಸಹ ವೈದ್ಯರನ್ನು ಇಲ್ಲಿಯೇ ಉಳಿಸಿಕೊಳ್ಳಲು ಪಟ್ಟು ಹಿಡಿದಿದ್ದಾರೆ. ರಾಜ್ಯದ 21 ಶಾಸಕರು ವೈದ್ಯರ ವರ್ಗಾವಣೆ ವಿರೋಧಿಸಿದರೂ ಅವರವರ ಕ್ಷೇತ್ರದಲ್ಲಿನ ಎಲ್ಲಾ ವೈದ್ಯರನ್ನು ಉಳಿಸಿಕೊಳ್ಳಲು ಆಗಿಲ್ಲ. ಶಾಸಕರ ಒತ್ತಡದ ಮೇರೆಗೆ ಕೆಲವು ವೈದ್ಯರ ವರ್ಗಾವಣೆಗೆ ಮಾತ್ರ ತಡೆ ಬಿದ್ದಿದ್ದು, ಜನರಿಗೆ ತೀರಾ ಅನುಕೂಲವಾಗಿದ್ದ ವೈದ್ಯರನ್ನು ಕಡ್ಡಾಯವಾಗಿ ಬೇರೆ ಕಡೆ ಕಳುಹಿಸಲಾಗಿದೆ.
ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿದ್ದ ಡಾ ದೀಪಕ ಭಟ್ಟ ಅವರನ್ನು ಕುಮಟಾಗೆ ವರ್ಗಾಯಿಸಲಾಗಿದೆ. ಅವರ ಪತ್ನಿ ಡಾ ಸೌಮ್ಯಾ ಕೆವಿ ಅವರನ್ನು ಇಲ್ಲಿಯೇ ಉಳಿಸಲಾಗಿದ್ದು, ಸರ್ಕಾರದ ಈ ವರ್ಗಾವಣೆ ನೀತಿ ಗಂಡ – ಹೆಂಡತಿಯರನ್ನು ದೂರ ಮಾಡಿದೆ. ವರ್ಗಾವಣೆ ವಿಷಯ ಕೇಳಿ ಗರ್ಭಿಣಿ-ಬಾಣಂತಿಯರು ಕಣ್ಣೀರು ಸುರಿಸುತ್ತಿದ್ದು, ಅವರನ್ನು ಸಮಾಧಾನ ಮಾಡಲಾಗದ ಸ್ಥಿತಿಯಲ್ಲಿ ವೈದ್ಯರಿದ್ದಾರೆ. ಮುಂಡಗೋಡ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಜನಪ್ರಿಯ ವೈದ್ಯ ಡಾ ಸಂಜೀವ ಗಲಗಲಿ ಅವರನ್ನು ವರ್ಗಾಯಿಸಲಾಗಿದೆ. ಸರಳ ವ್ಯಕ್ತಿತ್ವದ ಡಾ ಸಂಜೀವ ಅವರು ಮುಂಡಗೋಡು ತಾಲೂಕಿನ ಜನರ ನೋವಿಗೆ ಸ್ಪಂದಿಸುತ್ತಿದ್ದು, ಅವರ ವರ್ಗಾವಣೆ ಅನೇಕರಿಗೆ ಬೇಸರ ತರಿಸಿದೆ. ಡಾ ಸಂಜೀವ ಅವರನ್ನು ಯಲ್ಲಾಪುರದ ಉಮ್ಮಚ್ಗಿಗೆ ವರ್ಗಾಯಿಸಿದ ಬಗ್ಗೆ ಮಾಹಿತಿಯಿದೆ.
ಭಟ್ಕಳದಲ್ಲಿ ಹೆಸರು ಮಾಡಿದ್ದ ಡಾ ಲಕ್ಷಿಶ ನಾಯ್ಕ ಅವರನ್ನು ಕುಮಟಾಗೆ ವರ್ಗಾಯಿಸಲಾಗಿದೆ. ಡಾ ಸವಿತಾ ಕಾಮತ್ ಅವರನ್ನು ಬೈಂದೂರಿಗೆ ಕಳುಹಿಸಲಾಗಿದೆ. ಡಾ ಕಮಲಾ ಅವರನ್ನು ಹೊನ್ನಾವರಕ್ಕೆ ವರ್ಗಾಯಿಸಲಾಗಿದೆ. ಹೊನ್ನಾವರದಲ್ಲಿ ಕರ್ತವ್ಯದಲ್ಲಿದ್ದ ಪ್ರಕಾಶ ನಾಯ್ಕ ಅವರನ್ನು ಭಟ್ಕಳಕ್ಕೆ ಕಳುಹಿಸಲಾಗಿದ್ದು, ಬೇರೆ ಹುದ್ದೆಗಳಿಗೆ ವೈದ್ಯರ ವರ್ಗಾವಣೆ ನಡೆದಿಲ್ಲ. ಹೀಗಾಗಿ ಸದ್ಯ ಭಟ್ಕಳ ಆಸ್ಪತ್ರೆಯಲ್ಲಿ ಅನೇಕ ವೈದ್ಯರ ಕೊರತೆ ಎದುರಾಗಿದೆ. ಕುಮಟಾದಲ್ಲಿ ಐದು ವೈದ್ಯರ ವರ್ಗಾವಣೆ ವಿಷಯ ಚರ್ಚೆಯಲ್ಲಿದ್ದು, ಅದರಲ್ಲಿ ಮೂವರ ಹೆಸರು ವರ್ಗಾವಣೆ ಪಟ್ಟಿಯಿಂದ ರದ್ಧಾಗಿದೆ. ಡಾ ಶ್ರೀನಿವಾಸ ನಾಯಕ ಹಾಗೂ ಡಾ ಪಾಂಡುರoಗ ದೇವಾಡಿಗ ಅವರ ವರ್ಗಾವಣೆಗೆ ಜನ ವಿರೋಧವಿದ್ದರೂ ಸರ್ಕಾರ ಪಟ್ಟು ಸಡಿಸಿಲ್ಲ. ಕುಮಟಾದಲ್ಲಿ ಪಾಂಡುರoಗ ಅವರನ್ನು ಅಂಕೋಲಾಗೆ ವರ್ಗಾಯಿಸಿದೆ. ಅಂಕೋಲಾದ ಈಶ್ವರಪ್ಪ ಅವರನ್ನು ಕುಮಟಾಗೆ ಕಳುಹಿಸಲಾಗಿದೆ. ಡಾ ಶ್ರೀನಿವಾಸ ನಾಯ್ಕ ಅವರನ್ನು ಹೊನ್ನಾವರಕ್ಕೆ ವರ್ಗಾಯಿಸಲಾಗಿದೆ.
ಸರಿಯಾಗಿದ್ದ ವ್ಯವಸ್ಥೆಯನ್ನು ಹಾಳುಗೆಡವಿ ವೈದ್ಯರ ವರ್ಗಾವಣೆ ನಡೆದಿದ್ದರಿಂದ ಆರೋಗ್ಯ ಸೇವೆಯಲ್ಲಿ ಅನೇಕ ಅನಾನುಕೂಲತೆಯಾಗುತ್ತಿದೆ. `ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೂ ಇಲ್ಲ. ಸರಿಯಾಗಿರುವ ವೈದ್ಯರನ್ನು ಉಳಿಸಿಕೊಳ್ಳಲಾಗಿಲ್ಲ’ ಎಂಬ ಕೊರಗು ಜನರನ್ನು ಕಾಡುತ್ತಿದೆ.
Discussion about this post