ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಂಡಗೋಡಿನ ದಲಿತ ರಕ್ಷಣಾ ವೇದಿಕೆ ಹಾಗೂ ಅನ್ನದಾತ ರೈತ ಸಂಘದವರು ಹಸಿರು ಸೇನೆ ಜೊತೆ ಸೇರಿ ಪ್ರತಿಭಟನೆ ನಡೆಸಿದ್ದಾರೆ.
`ಮುಂಡಗೋಡಿನ ಬಸ್ ಡಿಪೋ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿ ಅಗತ್ಯ ಬಸ್ ಸೌಕರ್ಯ ಒದಗಿಸಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. `ಸರ್ಕಾರಿ ಕೆಲಸ ನಿರ್ವಹಿಸಿದ ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗಿಲ್ಲ. ಆ ಹಣ ಬಿಡುಗಡೆ ಮಾಡಬೇಕು. ಮುಂಡಗೋಡು ಆಸ್ಪತ್ರೆಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆ ಭರ್ತಿಯಾಗಬೇಕು’ ಎಂದು ಒತ್ತಾಯಿಸಿದರು.
`ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರದ ಪೈಕಿ ಒಂದನ್ನು ದಲಿತರಿಗೆ ಮೀಸಲಿಡಬೇಕು. ಗೃಹ ರಕ್ಷಕದಳದವರಿಗೆ ವರ್ಷವಿಡೀ ಕೆಲಸ ಕೊಡಬೇಕು. ಅತಿಕ್ರಮಣದಾರರಿಗೆ ಪಟ್ಟಾ ನೀಡಬೇಕು. ಪೊಲೀಸರ ಮೇಲಿನ ದಬ್ಬಾಳಿಕೆ ತಪ್ಪಬೇಕು’ ಎಂಬುದನ್ನು ಸೇರಿ ವಿವಿಧ ವಿಷಯಗಳ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ರೈತ ಸಂಘದ ರಾಜ್ಯ ಕಾನೂನು ಸಲಹೆಗಾರ ಅಮರೇಶ್ ಹರಿಜನ, ಮುಖಂಡರಾದ ಹನ್ಮಂತಪ್ಪ ಆರೆಗೊಪ್ಪ, ಭೀಮಸಿ ವಾಲ್ಮೀಕಿ, ಎಸ್ ಎಸ್ ಪಾಟೀಲ ಇತರರಿದ್ದರು.
