ಅ0ಕೋಲಾದ ಕೇಣಿಯಲ್ಲಿ ಬಂದರು ನಿರ್ಮಾಣ ವಿಷಯವಾಗಿ ಹೋರಾಟ ನಡೆಯುತ್ತಿದ್ದು, ಗುತ್ತಿಗೆ ಕೆಲಸ ಪಡೆದ JSW ಕಂಪನಿ ಮೀನುಗಾರರಿಗೆ ಆಮೀಷ ಒಡ್ಡಲು ಮುಂದಾಗಿದೆ. ಕಂಪನಿ ನೀಡಿದ ಬಗೆ ಬಗೆಯ ವಸ್ತುಗಳನ್ನು ಅಲ್ಲಿನ ಜನ ಒಕ್ಕೂರಲಿನಿಂದ ತಿರಸ್ಕರಿಸಿದ್ದಾರೆ.
ಸೋಮವಾರ ದಿಢೀರ್ ಆಗಿ ಅಂಕೋಲಾ ಭಾಗಕ್ಕೆ ಬಂದ ಗುತ್ತಿಗೆ ಕಂಪನಿ ಪ್ರತಿನಿಧಿಗಳು ಬಗೆ ಬಗೆಯ ವಸ್ತುಗಳನ್ನು ವಿತರಿಸಿದರು. ಅದರ ಮೇಲೆ JSW ಎಂಬ ಹೆಸರು ಬರೆದು ಪ್ರಚಾರಪಡೆಯುವ ತಂತ್ರ ಮಾಡಿದರು. ಆದರೆ, ಜನ ಅವರು ತಂದಿದ್ದ ವಸ್ತುಗಳನ್ನು ಅವರಿಗೆ ಹಿಂತಿರುಗಿಸಿದ್ದರಿ0ದ ಕಂಪನಿ ಪ್ರತಿನಿಧಿಗಳು ಮುಖಭಂಗ ಅನುಭವಿಸಿದರು. ಲಾರಿ ತುಂಬ ಉಡುಗರೆ ತಂದಿದ್ದ ಕಂಪನಿಯವರು ಗತಿಯಿಲ್ಲದೇ ಅಲ್ಲಿಂದ ಜಾಗ ಖಾಲಿ ಮಾಡಿದರು.
ಕಳೆದ ಒಂದು ವರ್ಷದಿಂದ ಬಂದರು ನಿರ್ಮಾಣ ವಿಷಯವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ. ಮೀನುಗಾರರು ಬಂದರು ನಿರ್ಮಾಣವನ್ನು ವಿರೋಧಿಸುತ್ತಲೇ ಇದ್ದಾರೆ. ಈ ನಡುವೆ ಅನೇಕರಿಗೆ ಹಣ ಸಂದಾಯವಾದ ಮಾಹಿತಿಯಿದ್ದು, ಶಾಸಕ ಸತೀಶ್ ಸೈಲ್ ಮುಂದಾಳತ್ವದಲ್ಲಿಯೇ ಒಮ್ಮೆ ಈ ಬಗ್ಗೆ ಚರ್ಚೆ ನಡೆದಿದೆ. `ಏನಾದರೂ ಸರಿ.. ಬಂದರು ಮಾಡುವುದೇ ನಮ್ಮ ಗುರಿ’ ಎಂದು ಜಿಎಸ್ಡಬ್ಲು ಕಂಪನಿ ಸಹ ಪಣತೊಟ್ಟಿದ್ದು, ಜನರ ಓಲೈಕೆಗೆ ನಾನಾ ಕಸರತ್ತು ಮಾಡುತ್ತಿದೆ.
ಈಗಾಗಲೇ ಕೆಲ ನಾಯಕರನ್ನು ಕಂಪನಿಯವರು ಬುಟ್ಟಿಗೆ ಹಾಕಿಕೊಂಡ ಬಗ್ಗೆ ಚರ್ಚೆ ನಡೆದಿದೆ. ಅದರ ಬೆನ್ನಲ್ಲೆ ಇದೀಗ ಆ ಭಾಗದ ಶಾಲೆ ಮಕ್ಕಳಿಗೆ ಬ್ಯಾಗು, ಮಹಿಳೆಯರಿಗೆ ಕುಕ್ಕರು, ಕೊಡೆ, ವಾಟರ್ ಬಾಟಲ್, ಥರ್ಮಸ್ ವಿತರಿಸಲು ಮುಂದಾಗಿ ಅದಕ್ಕೆ ಹಿನ್ನಡೆಯಾಗಿದೆ. `ಬಂದರು ಸಹ ಬೇಡ.. ಉಡುಗರೆಯೂ ಬೇಡ’ ಎಂದು ಜನ ಘೋಷಣೆ ಕೂಗಿದ್ದಾರೆ.
Discussion about this post