ವರ್ಷಕ್ಕೆ ನಾಲ್ಕು ಬಾರಿ ರಕ್ತದಾನ ಮಾಡುವುದನ್ನು ರೂಢಿಸಿಕೊಂಡಿರುವ ಶಿರಸಿಯ ಮಕ್ಕಳ ತಜ್ಞ ಡಾ ದಿನೇಶ ಹೆಗಡೆ ಮಂಗಳವಾರ 69ನೇ ಬಾರಿ ರಕ್ತದಾನ ಮಾಡಿದ್ದಾರೆ. ಈ ಬಾರಿ ಅವರು ತಮ್ಮ ಕುಟುಂಬದವರನ್ನು ರಕ್ತದಾನಕ್ಕೆ ಕರೆದೊಯ್ದು, ಅವರಿಂದಲು ಜನರ ಜೀವ ಉಳಿಸುವ ಪುಣ್ಯ ಕಾರ್ಯ ಮಾಡಿಸಿದ್ದಾರೆ.
ಡಾ. ದಿನೇಶ ಹೆಗಡೆ ಅವರು ಶಿರಸಿಯ ದೇವಿಕೆರೆ ಬಳಿ ಮಹಾಲಕ್ಷ್ಮಿ ಮೆಮೋರಿಯಲ್ ಆಸ್ಪತ್ರೆ ನಡೆಸುತ್ತಿದ್ದಾರೆ. ಅವರ ಪತ್ನಿ ಡಾ ಸುಮನ್ ಹೆಗಡೆ ಅವರು ಬ್ಲಡ್ ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಅವರಿಬ್ಬರ ಅವಳಿ-ಜವಳಿ ಮಕ್ಕಳು ಪಿಯುಸಿ ಪರೀಕ್ಷೆ ಮುಗಿಸಿದ್ದು, ಕುಟುಂಬದವರೆಲ್ಲ ಒಟ್ಟಾಗಿ ಮಂಗಳವಾರ ರಕ್ತದಾನ ಮಾಡಿದರು.
17ನೇ ವಯಸ್ಸಿನಿಂದಲೂ ಡಾ ದಿನೇಶ ಹೆಗಡೆ ಅವರು ರಕ್ತದಾನ ಮಾಡುವ ಪರಂಪರೆ ಬೆಳೆಸಿಕೊಂಡಿದ್ದಾರೆ. ಡಾ ದಿನೇಶ ಹೆಗಡೆ ಅವರು ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ವೇಳೆ ರೋಗಿಗಳ ಸಂಬoಧಿಕರು ರಕ್ತಕ್ಕಾಗಿ ಹುಡುಕಿಕೊಂಡು ಹಾಸ್ಟೇಲ್ ಕಡೆ ಬರುತ್ತಿದ್ದರು. ಬರುತ್ತಿದ್ದರು. ರಕ್ತದಾನದ ಬಗ್ಗೆ ಜನರಲ್ಲಿ ಅರಿವಿಲ್ಲದ ಕಾಲಘಟ್ಟದಲ್ಲಿ ಡಾ ದಿನೇಶ ಹೆಗಡೆ ಅವರು ಧೈರ್ಯ ಮಾಡಿದರು. ಕೆಲವರು ರಕ್ತಕ್ಕಾಗಿ ಪರದಾಡುವುದನ್ನು ನೋಡಿದ ಅವರು ವರ್ಷಕ್ಕೆ 4 ಬಾರಿ ರಕ್ತದಾನ ಮಾಡುವ ನಿರ್ಧಾರ ಮಾಡಿದರು.
ಹೀಗಾಗಿ ಎಂಬಿಬಿಎಸ್ ಓದುವ ವೇಳೆ ಅವರು ಸ್ನೇಹಿತರ ಜೊತೆ ಸೇರಿ `ಲೈಫ್ ಲೈನ್ ಬ್ಲಡ್ ಡೋನರ್ಸ್’ ಎಂಬ ಗುಂಪು ರಚಿಸಿಕೊಂಡು ತುರ್ತು ಸನ್ನಿವೇಶದಲ್ಲಿ ರಕ್ತದಾನ ಮಾಡುವುದನ್ನು ರೂಢಿಸಿಕೊಂಡಿದ್ದರು. ಆ ಸಮಾನ ಮನಸ್ಕರ ಮೂಲಕ ಇತರರನ್ನು ಪ್ರೇರೇಪಿಸಿ ರಕ್ತದಾನ ಮಾಡಿಸುತ್ತಿದ್ದರು. ನಿಯಮಿತವಾಗಿ ರಕ್ತದಾನ ಮಾಡುವ ಮೂಲಕ ವ್ಯಕ್ತಿಯ ದೇಹದ ತೂಕ ಸಮತೋಲನ, ಬೊಜ್ಜು ನಿಯಂತ್ರಣ ಸಾಧ್ಯ ಎಂಬುದನ್ನು ಅವರು ಪ್ರಚಾರ ಮಾಡಿದರು.
ಡಾ ದಿನೇಶ ಹೆಗಡೆ ಅವರಿಂದ ಪ್ರೇರಣೆಗೆ ಒಳಗಾಗಿ ಅವರ ಕುಟುಂಬದವರು ರಕ್ತದಾನದ ಕಡೆ ಒಲವು ತೋರಿದರು. ಡಾ ಸುಮನ್ ಹೆಗಡೆ ಅವರು ಈವರೆಗೆ 15 ಬಾರಿ ರಕ್ತದಾನ ಮಾಡಿದ್ದಾರೆ. ಈ ದಂಪತಿಯ ಮಕ್ಕಳಾದ ದಕ್ಷಾ ಹೆಗಡೆ ಹಾಗೂ ರಕ್ಷಾ ಹೆಗಡೆ ಇದೇ ಮೊದಲ ಬಾರಿ ರಕ್ತದಾನ ಮಾಡಿದ್ದು, ಬೇರೆಯವರ ಜೀವ ಉಳಿಸಿದ ಸಂತ್ರಪ್ತಿ ಅನುಭವಿಸಿದರು.
Discussion about this post