ಹೊನ್ನಾವರ: ವಿದ್ಯುತ್ ನಿಗಮವು ಗೇರುಸೊಪ್ಪದಲ್ಲಿ ವಾಸಿಸುವ ನಿಗಮದ ಸಿಬ್ಬಂದಿಗೆ 24 ಗಂಟೆ ಉಚಿತ ವಿದ್ಯುತ್ ನೀಡುತ್ತಿದ್ದು, ವಿದ್ಯುತ್ ಯೋಜನೆಗೆ ಸಂಕಷ್ಟ ಅನುಭವಿಸಿದವರಿಗೆ ಈ ಭಾಗ್ಯವಿಲ್ಲ.
ಶರಾವತಿ ನದಿ ಪಾತ್ರದ ಜನರು ಜಲವಿದ್ಯುತ್ ಯೋಜನೆಗಾಗಿ ಸರ್ವಸ್ವವನ್ನು ತ್ಯಜಿಸಿದ್ದಾರೆ. ಆ ಭಾಗದಲ್ಲಿ ನಿರಂತರ ನೆರೆಯಿಂದ ಅಲ್ಲಿನವರು ಸಮಸ್ಯೆಯಲ್ಲಿದ್ದಾರೆ. ಅದಾಗಿಯೂ ಅವರಿಗೆ ನಿರಂತರ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಶರಾವತಿ ನದಿಪಾತ್ರದ ಜನ ತೊಂದರೆಗೆ ಸಿಲುಕಿದ್ದಾರೆ. ಮಳೆಗಾಲದಲ್ಲಿ ಒಮ್ಮೆಯೂ ಇಡೀ ದಿನ ವಿದ್ಯುತ್ ಪೂರೈಸಲು ಸಾಧ್ಯವಾಗಿಲ್ಲ. ಗೇರುಸೊಪ್ಪದಲ್ಲಿ ವಿದ್ಯುತ್ ಉತ್ಪಾದನೆ ನಡೆದರೂ ನೂರಾರು ಮೈಲಿಗಳ ದೂರದ ಗ್ರಿಡ್ಗಳಿಂದ ನದಿಪಾತ್ರಕ್ಕೆ ಅಸಮರ್ಪಕ ರೀತಿ ವಿದ್ಯುತ್ ತಂತಿ ಎಳೆಯಲಾಗಿದೆ. ಆದರೆ, ಅಲ್ಲೇ ಸಮೀಪದಲ್ಲಿರುವ ನಿಗಮದ ಸಿಬ್ಬಂದಿಗೆ ಮಾತ್ರ ಯಾವುದೇ ಸಮಸ್ಯೆ ಆಗದಂತೆ ಹಗಲು ರಾತ್ರಿ ವಿದ್ಯುತ್ ಪೂರೈಸಲಾಗುತ್ತದೆ.
ಶರಾವತಿ ಸಂತ್ರಸ್ತರಿಗೆ ಸಹ ಅಂಡರ್ಗ್ರೌoಡ್ ಕೇಬಲ್ ಮೂಲಕ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ. ಅಂಡರ್ ಗ್ರೌಂಡ ಆಲ್ ಸೀಜನಲ್ ಕೇಬಲ್ಗಳನ್ನು ಅಳವಡಿಸಿ ವಿದ್ಯುತ್ ವಿತರಣಾ ಜಾಲವನ್ನು ಪುನಶ್ಚೇತನಗೊಳಿದರೆ ವಿದ್ಯುತ್ ವಿತರಣೆಯಲ್ಲಿನ ಸೋರಿಕೆ ತಪ್ಪುತ್ತದೆ. ಕಡಿಮೆ ವೆಚ್ಚದಲ್ಲಿ ನಿರಂತರ ವಿದ್ಯುತ್ ಪೂರೈಕೆ ಸಹ ಸಾಧ್ಯ ಎಂಬುದು ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೊಚರೇಕರ ಅವರ ಅಭಿಮತ.