90ರ ದಶಕದಲ್ಲಿ ಸಾಕಷ್ಟು ಹೋರಾಟ ನಡೆಸಿದರೂ ಉತ್ತರ ಕನ್ನಡ ಜಿಲ್ಲೆಯ ಜನರಿಂದ ಕೈಗಾ ಅಣು ಘಟಕ ತಡೆಯಲು ಸಾಧ್ಯವಾಗಲಿಲ್ಲ. ಸೀಬರ್ಡ ಯೋಜನೆ ಸ್ಥಾಪನೆಯಾಗಿ ದಶಕ ಕಳೆದರೂ ಪೂರ್ಣ ಪ್ರಮಾಣದ ಪರಿಹಾರಕ್ಕಾಗಿ ಅಲ್ಲಿನ ಸಂತ್ರಸ್ತರು ಅಲೆದಾಡುವುದು ತಪ್ಪಿಲ್ಲ. ಇದೀಗ, ಖಾಸಗಿ ಬಂದರು ಹೆಸರಿನಲ್ಲಿ ಮೀನುಗಾರ ಮಕ್ಕಳನ್ನು ಒಕ್ಕಲೆಬ್ಬಿಸುವುದನ್ನು ತಡೆಯಲು ಸಹ ಯಾರಿಂದಲೂ ಸಾಧ್ಯವಾಗುತ್ತಿಲ್ಲ!
ಅಂಕೋಲಾ ತಾಲೂಕಿನ ಕೇಣಿಯಲ್ಲಿ JSW ಕಂಪನಿ ವಾಣಿಜ್ಯ ಬಂದರು ನಿರ್ಮಾಣದ ಸಿದ್ಧತೆ ನಡೆಸಿದೆ. `ಈ ವಾಣಿಜ್ಯ ಬಂದರು ಬರುವುದರಿಂದ ಸ್ಥಳೀಯವಾಗಿ ಉದ್ಯೋಗವಕಾಶ ಸಿಗಲಿದೆ’ ಎಂಬುದು ಕಂಪನಿಯ ಅಂಬೋಣ. ಆದರೆ, ಇದರಿಂದ `ಸ್ಥಳೀಯ ಮೀನುಗಾರರು ಮೀನುಗಾರಿಕೆ ವೃತ್ತಿಯಿಂದಲೇ ದೂರವಾಗಬೇಕಾಗುತ್ತದೆ’ ಎಂಬುದು ಮೀನುಗಾರರ ಆತಂಕ. ಈಗಾಗಲೇ JSW ಕಂಪನಿ ಬಂದರು ನಿರ್ಮಾಣಕ್ಕಾಗಿ ಸಾಕಷ್ಟು ಉದ್ಯೋಗಿಗಳನ್ನುಪಡೆದಿದ್ದು ಅಲ್ಲಿ ಎಲ್ಲಿಯೂ ಸ್ಥಳೀಯರಿಲ್ಲ ಎಂಬುದು ಸಹ ಗಮನಿಸಬೇಕಾದ ಪ್ರಮುಖ ಅಂಶ!
`ಬ0ದರು ನಿರ್ಮಾಣದಿಂದ ಪರಿಸರ ನಾಶ ಆಗಲ್ಲ’ ಎಂಬುದು ಕಂಪನಿಯ ನಂಬಿಕೆ. `ಪರಿಸರಕ್ಕೆ ಹಾನಿ ಮಾಡದ ರೀತಿ ಇಂಧನವೂ ಇಲ್ಲದೇ ಸಮುದ್ರದಲ್ಲಿ ಹಡಗು ಓಡಾಟ ನಡೆಸಲಿದೆಯೇ?’ ಎಂಬುದು ಅಲ್ಲಿನ ಜನರ ಪ್ರಶ್ನೆ. `ಅಹವಾಲು ಸಭೆ ನಡೆಸುತ್ತೇವೆ’ ಎನ್ನುತ್ತಲೇ ಕಾಲಹರಣ ಮಾಡುತ್ತಿರುವ ಕಂಪನಿ ಅವಹಾಲು ಸಭೆಗೂ ದಿನಾಂಕ ನಿಗದಿ ಮಾಡಿಲ್ಲ. ಅಲ್ಲಿ ಜನ ವಿರೋಧವ್ಯಕ್ತಪಡಿಸಿದರೂ ಅದನ್ನು ಗಂಭೀರವಾಗಿ ಪರಿಗಣಿಸುವ ಲಕ್ಷಣಗಳು ಕಾಣುತ್ತಿಲ್ಲ.
`ಬಂದರು ನಿರ್ಮಾಣದ ನಂತರ ಸುತ್ತಲಿನ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯ’ ಎಂಬುದು ಕಂಪನಿಯ ಪ್ರಕಟಣೆ. `ಗುಡ್ಡ ಕುಸಿತ, ನೆರೆ ಪ್ರವಾಹದ ಅವಧಿಯಲ್ಲಿ ಜನರ ಸಂಕಷ್ಟ ಆಲಿಸಲು ಬಾರದ ಈಗ ಬಂದು ಪ್ರಯೋಜನವೇನು’? ಎಂಬುದು ಜನ ಆಕ್ರೋಶ. `ಶಾಲಾ ಮಕ್ಕಳಿಗೆ ಚಾಕಲೇಟು, ಬ್ಯಾಗು, ಮಹಿಳೆಯರಿಗೆ ಕುಕ್ಕರು, ಥರ್ಮಸ್ ನೀಡಿ ಆಮೀಷ ಒಡ್ಡಿದ ಮಾತ್ರಕ್ಕೆ ನಾವು ಅನ್ಯಾಯ ಸಹಿಸುವುದಿಲ್ಲ’ ಎಂಬುದು ಜನರ ಮಾತು.
`ಬಂದರು ಬರುವುದರಿಂದ ರಸ್ತೆ ಅಭಿವೃದ್ಧಿಯಾಗುತ್ತದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರನ್ನು ಆಕರ್ಷಿಸಲಾಗುತ್ತದೆ’ ಎಂಬುದು ಕಂಪನಿಯ ಕನಸು. `ಸರ್ಕಾರವೇ ಪ್ರಯತ್ನ ಮಾಡಿದರೂ ಉತ್ತರ ಕನ್ನಡಕ್ಕೆ ಹೂಡಿಕೆದಾರರು ಬರಲಿಲ್ಲ. ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿ ಪಾಳುಬಿಟ್ಟಿದ್ದು ಬಿಟ್ಟು ಬೇರೇನೂ ಆಗಿಲ್ಲ’ ಎಂಬುದು ಜನ ಬಿಚ್ಚಿಟ್ಟ ವಾಸ್ತವ.
ಇನ್ನೂ ಬಂದರು ನಿರ್ಮಾಣದ ಸಮೀಕ್ಷೆ ವೇಳೆಯಲ್ಲಿಯೇ ಮೀನುಗಾರರನ್ನು ಹತ್ತಿರ ಬಿಟ್ಟುಕೊಳ್ಳದ ಕಂಪನಿ ಬಂದರು ನಿರ್ಮಾಣದ ನಂತರ ಅಲ್ಲಿ ಮೀನುಗಾರಿಕೆ ನಡೆಸಲು ಕೊಡುತ್ತದೆ ಎಂಬ ವಿಶ್ವಾಸವೂ ಅಲ್ಲಿನವರಿಗೆ ಇಲ್ಲ.
