ದಾಂಡೇಲಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಎಲ್ಲಡೆ ತ್ಯಾಜ್ಯ ತುಂಬಿದ್ದು, ಬುಧವಾರ ರಾತ್ರಿ ಲಿಂಕ್ ರಸ್ತೆಯಲ್ಲಿನ ಮನೆಗಳಿಗೆ ತ್ಯಾಜ್ಯ ನುಗ್ಗಿದೆ. ಗುರುವಾರ ಅದನ್ನು ತೆಗೆಯುವ ಕಾರ್ಯ ನಡೆದಿದೆ.
ಬುಧವಾರ ಬೆಳಗ್ಗೆಯಿಂದ ದಾಂಡೇಲಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಗಟಾರಗಳಲ್ಲಿನ ನೀರು ಮುಂದೆ ಸಾಗಲಿಲ್ಲ. ಇದರಿಂದ ಅಲ್ಲಿನ ತ್ಯಾಜ್ಯ ಅಕ್ಕ-ಪಕ್ಕದ ಮನೆಗಳಿಗೆ ನುಗ್ಗಿದವು. ರಾತ್ರಿಯಿಡೀ ಮನೆಯವರು ಮಲಗದೇ ಸಮಸ್ಯೆ ಅನುಭವಿಸಿದರು.
ಗುರುವಾರ ಬೆಳಗ್ಗೆ ಈ ವಿಷಯ ಅರಿತ ನಗರಸಭೆ ಅಧ್ಯಕ್ಷ ಅಪ್ಪಾಕ್ ಶೇಖ ಅವರು ಸದಸ್ಯರಾದ ಬುದವಂತಗೌಡ ಪಾಟೀಲ, ಪದ್ಮಜಾ ಪ್ರವೀಣ್ ಜನ್ನು, ಮೋಹನ ಹಲವಾಯಿ ಜೊತೆ ಸ್ಥಳಕ್ಕೆ ಭೇಟಿ ನೀಡಿದರು. ಪೌರಾಯುಕ್ತ ವಿವೇಕ ಬನ್ನೆ ಹಾಗೂ ನಗರಸಭೆ ಸಿಬ್ಬಂದಿಯಿAದ ಮಾಹಿತಿಪಡೆದು ಪರಿಶೀಲನೆ ಮಾಡಿದರು.
ಲಿಂಕ್ ರಸ್ತೆ ನಿವಾಸಿ ವೆಂಕಟೇಶ ಪಗಡೆ ಅವರ ಮನೆ ಮತ್ತು ಪಕ್ಕದಲ್ಲಿರುವ ಸಂತೋಷ ಹೋಟೆಲಿನ ಕೆಳ ಅಂತಸ್ತಿನೊಳಗೆ ನೀರು ನುಗ್ಗಿದ್ದು, ಮೊದಲು ಅದನ್ನು ತೆರವು ಮಾಡಿಸಿದರು. `ಕಳೆದ ಕೆಲ ದಿನದಿಂದ ಸಮಸ್ಯೆ ಆಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಅಗತ್ಯ’ ಎಂದು ಅಲ್ಲಿದ್ದ ಜನ ಹೇಳಿದರು. ನೀರು ಸರಾಗವಾಗಿ ಹೋಗುವಂತೆ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಹೇಳಿದರು.
ಇನ್ನಷ್ಟು ಮನೆಗಳಲ್ಲಿ ನೀರು ನುಗ್ಗಿದ್ದು, ಜನ ಅದನ್ನು ತೆಗೆಯಲು ಇಡೀ ದಿನ ಸಾಹಸ ನಡೆಸುತ್ತಿರುವುದು ಕಾಣಿಸಿತು.
