ಕದ್ರಾ- ಕೊಡಸಳ್ಳಿ ಭಾಗದ ರಸ್ತೆ ಮೇಲೆ ಗುಡ್ಡ ಕುಸಿದು ಸಂಚಾರ ಬಂದ್ ಆಗಿರುವುದರಿಂದ ಆ ಭಾಗದ ವಿದ್ಯಾರ್ಥಿನಿಯೊಬ್ಬರು ಬೆಟ್ಟ ಹತ್ತಿ.. ಗುಡ್ಡ ಇಳಿದು ಕಾರವಾರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ.
ಈ ಭಾಗದಲ್ಲಿ ಗುಡ್ಡ ಕುಸಿದಿದ್ದರಿಂದ ಕೊಡಸಳ್ಳಿ ಭಾಗದ ಬಾಳೆಮನೆ, ಸುಳಗೇರಿ ಭಾಗದ ಸಂಪರ್ಕ ಕಡಿತವಾಗಿದೆ. ಸುಳಗೇರಿಗೆ ತೆರಳಿದ್ದ ಬಸ್ ಸಹ ಗ್ರಾಮದಲ್ಲಿ ಸಿಲುಕಿದೆ. ಕೊಡಸಳ್ಳಿ ಜಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ 25 ಜನ ಕಾರ್ಯ ನಿರ್ವಹಿಸುತಿದ್ದು ಅವರು ಅಲ್ಲಿಗೆ ತೆರಳಲಾಗುತ್ತಿಲ್ಲ. ಈ ನಡುವೆ ಸುಳಗೇರಿಯ ವಿದ್ಯಾರ್ಥಿನಿ ಸಾನಿಯಾ ಊರಿನಲ್ಲಿ ಸಿಲುಕಿಕೊಂಡಿದ್ದು, ಕಷ್ಟಪಟ್ಟು ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಎದುರಿಸಿದ್ದಾರೆ.
ಸಾನಿಯಾ ಅವರು ಉಳಗಾದ ಮಾಹಾಸತಿ ಆರ್ಟ್ಸ & ಸೈನ್ಸ್ ಕಾಲೇಜಿನಲ್ಲಿ BSC ಓದುತ್ತಿದ್ದಾರೆ. ಪರೀಕ್ಷೆಗೆ ಹಾಜರಾಗಲು ಈ ವಿದ್ಯಾರ್ಥಿನಿ ಕಾಲು ನಡಿಗೆಯಲ್ಲಿ 5ಕಿಮೀ ನಡೆದ ಅವರಿಗೆ ಕಾಳಿ ನದಿ ತೀರ ಭಾಗದಿಂದ ನದಿ ದಾಟಿ ಹೋಗಲು ಪ್ರಯತ್ನಿಸಿದರು. ಆಗ, ಅಗ್ನಿಶಾಮಕ ಸಿಬ್ಬಂದಿ ಕೊಡಸಳ್ಳಿ ವಿದ್ಯುತ್ಗಾರದಲ್ಲಿ ಸಿಲುಕಿದ್ದ ಐದು ಜನರನ್ನು ರಕ್ಷಿಸಿದ್ದು, ಮರದ ದಿಮ್ಮಿಗಳ ಮೂಲಕ ಅವರು ಕಾರವಾರದ ಕಡೆ ಬಂದರು. ಸಾನಿಯಾ ಸಹ ಮರದ ದಿಮ್ಮಿ ಬಳಸಿ ಕದ್ರಾಗೆ ಆಗಮಿಸಿದರು. ಅಲ್ಲಿಂದ ಮುಂದೆ ಸಾಗಿ ಪರೀಕ್ಷೆ ಎದುರಿಸಿದರು.
ಸದ್ಯ ಈ ಭಾಗದಲ್ಲಿ ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇರುವ ಕಾರಣ ಈ ಭಾಗದಲ್ಲಿ ಜನರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊಡಸಳ್ಳಿ ಮೂಲಕ ಯಲ್ಲಾಪುರ ಭಾಗಕ್ಕೆ ರಸ್ತೆ ಇದ್ದರೂ ವಾಹನಗಳ ಓಡಾಟ ಇಲ್ಲ. ಬಸ್ ಸಹ ಇಲ್ಲ. ಹೀಗಾಗಿ ಜನರಿಗೆ ಕದ್ರಾ ಭಾಗದ ನದಿಯ ದಡ ಅನಿವಾರ್ಯವಾಗಿದೆ.
`ನಾನು ಪ್ರತಿ ದಿನ ಕಾರವಾರದಿಂದ ಸುಳಗೇರಿಗೆ ಬಸ್ಸಿನಲ್ಲಿ ಓಡಾಡುತ್ತೇನೆ. ನನ್ನಂತೆ ಹಲವು ಶಾಲಾ ವಿದ್ಯಾರ್ಥಿಗಳು ಸಹ ಓಡಾಡುತ್ತಾರೆ. ಈಗ ಭೂ ಕುಸಿತವಾದ್ದರಿಂದ ಕಾಲೇಜು, ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಹೋಗಲು ದಾರಿಯೇ ಇಲ್ಲ. ಊರಿನಲ್ಲಿ ವಯಸ್ಸಾದವರು, ಅನಾರೋಗ್ಯಪೀಡಿತರು ಸಹ ಇದ್ದಾರೆ, ಅವರಿಗೆಲ್ಲಾ ಸಮಸ್ಯೆ ಆಗಿದೆ’ ಎಂದು ಸಾನಿಯಾ ಹೇಳಿದರು.
