ದಾಂಡೇಲಿ ಅಂಬೇವಾಡಿಯ ಗಾಂವಠಾಣಾದಲ್ಲಿದ್ದ ಅಂಕುಶ ಸುತಾರ್ ಅವರ ಕೊಲೆಗೆ ಸುಪಾರಿ ನೀಡಿದ್ದ ಅವರ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್’ಗೆ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
2021ರ ಜೂನ್ 11ರಂದು ಅಂಕುಶ ಸುತಾರ್ ಅವರ ಕೊಲೆ ಪ್ರಯತ್ನ ನಡೆದಿತ್ತು. ಗಣೇಶ್ ಹಾಗೂ ಮತ್ತೊಬ್ಬ ಬಾಲಾಪರಾಧಿ ಸೇರಿ ಗಾಂವಠಾಣದಲ್ಲಿನ ಅಂಕುಶ ಸುತಾರ್ ಅವರ ಮನೆ ಒಳಗೆ ನುಗ್ಗಿದ್ದರು. ಅಂಕುಶ ಅವರ ಎದೆಗೆ ಅವರು ಅಂಕುಶ ಹಿಡಿದು ಕೊಲೆಗೆ ಯತ್ನಿಸಿದ್ದರು. ನಿದ್ದೆಯಿಂದ ಎಚ್ಚರವಾದ ಅಂಕುಶ್ ಪ್ರಾಣ ಉಳಿಸಿಕೊಂಡಿದ್ದರು. ಆರೋಪಿಗಳನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಗಣೇಶ್ ಪಾಟೀಲ್ 30 ಸಾವಿರ ರೂಪಾಯಿಗೆ ಸುಪಾರಿ ಪಡೆದಿರುವುದು ಗೊತ್ತಾಗಿತ್ತು. ಅಂಕುಶ್ ಅವರ ಪತ್ನಿ ಸುಪಾರಿ ನೀಡಿರುವುದು ಬೆಳಕಿಗೆ ಬಂದಿತ್ತು.
ವಿಚಾರಣೆ ನಡೆಸಿದ ನ್ಯಾಯಾಲಯ ಅಂಕುಶ ಅವರ ಪತ್ನಿ ತೇಜಸ್ವಿನಿ ಹಾಗೂ ಗಣೇಶ ಪಾಟೀಲಗೆ ಶಿಕ್ಷೆ ಪ್ರಕಟಿಸಿದೆ. 30 ಸಾವಿರ ದಂಡದ ಜೊತೆ 10 ವರ್ಷ ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಧೀಶ ಕಿರಣ ಕಿಣಿ ಆದೇಶಿಸಿದ್ದಾರೆ. ಸಂತ್ರಸ್ತರಿಗೆ 10 ಸಾವಿರ ರೂ ಪರಿಹಾರ ನೀಡುವಂತೆಯೂ ಸೂಚಿಸಲಾಗಿದೆ. ಅಂಕುಶ ಅವರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ್ ಎಂ ಮಳಗೀಕರ್ ವಾದಿಸಿದ್ದರು.
