ಅಂಕೋಲಾದ ನೆಲ್ಲೂರು ಕಂಚಿನಬೈಲ್ ಗ್ರಾಮಗಳ ಭೂ ಸ್ವಾಧೀನಕ್ಕೆ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದ್ದು, ರಾಜ್ಯಪತ್ರದಲ್ಲಿ ಈ ಪ್ರಕ್ರಿಯೆ ಪ್ರಕಟವಾಗಿದೆ. ಇದಕ್ಕೆ ಆಕ್ಷೆಪಣೆ ಸಲ್ಲಿಸಲು ಸಹ 60 ದಿನದ ಅವಕಾಶ ನೀಡಲಾಗಿದೆ.
ನೆಲ್ಲೂರು ಹಾಗೂ ಕಂಚಿನಬೈಲ್ ಗ್ರಾಮಗಳ 58 ಎಕರೆ 11 ಗುಂಟೆ ಖಾಸಗಿ ಜಾಗವನ್ನು ಭಾರತ ಸರ್ಕಾರದ ಭೂ ಸ್ವಾಧೀನ ಕಾಯ್ದೆ 2013 ರ ಅನ್ವಯ ಹಾಗೂ ಕರ್ನಾಟಕ ಸರ್ಕಾರದ ಭೂ ಸ್ವಾಧೀನ ತಿದ್ದುಪಡಿ ಕಾಯ್ದೆ 2019 ರ ಅನ್ವಯ ಸ್ವಾಧೀನ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಜೂನ್ 26ರ ರಾಜ್ಯ ಪತ್ರದಲ್ಲಿ ಈ ವಿಷಯ ಪ್ರಕಟವಾಗಿದೆ. ಪ್ರಕಟವಾದ 60 ದಿನಗಳ ಒಳಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಲಾಗಿದೆ.
ಒಟ್ಟು 123 ಸರ್ವೇ ನಂಬರ್‌ಗಳ ಸುಮಾರು 200ಕ್ಕೂ ಅಧಿಕ ರೈತರ ಜಮೀನುಗಳು ಸೇರಿವೆ. 34.2 ಎಕರೆ ಮಳೆಯಾಶ್ರಿತ ಬೆಳೆ ಬೆಳೆಯುವ ಗದ್ದೆ, 21.34 ಎಕರೆ ತರಿ, 2.13 ಎಕರೆ ತೋಟ, 1.11 ಎಕರೆ ಬ ಕರಾಬು ಜಮೀನುಗಳ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.
ಸೀಬರ್ಡ್ ನೌಕಾ ಯೋಜನೆಯ ಭಾಗವಾದ ಶಸ್ತ್ರಾಗಾರ ಐಎನ್‌ಎಸ್ ವಜ್ರಕೋಶಕ್ಕಾಗಿ ಹಟ್ಟಿಕೇರಿ ಭಾಗದ ಜಮೀನನ್ನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ, ಅದೇ ವ್ಯಾಪ್ತಿಯಲ್ಲಿರುವ ನೆಲ್ಲೂರು ಹಾಗೂ ಕಂಚಿನಬೈಲ್ ಗ್ರಾಮಗಳನ್ನು ಸ್ವಾಧೀನ ಮಾಡದೇ ಬಿಡಲಾಗಿತ್ತು. ನೌಕಾಸೇನೆ ಊರಿನ ಸುತ್ತಲೂ ಬೇಲಿ ಹಾಕಿದ್ದರಿಂದ ಗ್ರಾಮಸ್ಥರ ಓಡಾಟಕ್ಕೆ ಸಾಧ್ಯವಿರಲಿಲ್ಲ.
ಹೀಗಾಗಿ ಗ್ರಾಮಸ್ಥರು ಹಲವು ವರ್ಷಗಳಿಂದ `ನಮಗೆ ರಸ್ತೆ ಕೊಡಿ. ಇಲ್ಲವೇ ನಮ್ಮನ್ನೂ ಸ್ಥಳಾಂತರಿಸಿ’ ಎಂದು ಮನವಿ ಮಾಡಿದ್ದರು. ಹೊಸ ಕಾಯ್ದೆಯಂತೆ ಜಮೀನುಗಳಿಗೆ ಪರಿಹಾರ ಹಾಗೂ ಮಾಲೀಕರಿಗೆ ಪುನರ್ವಸತಿ ಕಲ್ಪಿಸಲು ಅವಕಾಶವಿದೆ. ಪುನರ್ವಸತಿಯನ್ನು ಮಾಡಿಕೊಡಬೇಕಿದ್ದು, ಸದ್ಯ ಈ ಪ್ರಕ್ರಿಯೆಗೆ ಅನುಗುಣವಾಗಿ ಅಧಿಸೂಚನೆ ಹೊರಡಿಸಲಾಗಿದೆ.
