ಯಲ್ಲಾಪುರ: `ಸ್ವಯಂಘೋಷಿತ ಕೃಷಿ ತಜ್ಞರ ಮಾತಿಗೆ ಮರುಳಾಗದೇ ವೈಜ್ಞಾನಿಕ ರೀತಿಯ ಸಮಗ್ರ ಕೃಷಿಗೆ ಒತ್ತು ಪ್ರಗತಿ ಸಾಧ್ಯ\’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಹೇಳಿದರು.
ಶನಿವಾರ ತಟಗಾರ ಗ್ರಾಮದ ಹಂಗಾರಿಮನೆ ಅಂಗಳದಲ್ಲಿ `ಕೃಷಿ ಪಾಠಶಾಲೆ\’ ಮೊದಲ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
`ವೈಜ್ಞಾನಿಕ ತಳಹದಿಯಲ್ಲಿ ಕೃಷಿ ಕಾಯಕ ಮಾಡಿದಾಗ ನಷ್ಟವಾಗುವ ಸಾಧ್ಯತೆಗಳಿರುವುದಿಲ್ಲ. ಯಾವುದೇ ಪದ್ಧತಿ ಆದರೂ ಅದಕ್ಕೆ ವೈಜ್ಞಾನಿಕ ಹಿನ್ನಲೆ, ಸಮಗ್ರ ಅಧ್ಯಯನ ಹಾಗೂ ಯಶಸ್ಸು ಕಂಡ ನಿದರ್ಶನಗಳಿರಬೇಕು. ಕೆಲವರು ರೈತರಲ್ಲಿ ತಪ್ಪು ಮಾಹಿತಿ ನೀಡಿ ಇಲ್ಲಸಲ್ಲದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಅಂಥವರ ಮಾತು ನಂಬಿದ ರೈತರು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಯಾವುದೇ ಕೃಷಿ ಉತ್ಪನ್ನ ಬಳಸುವ ಮೊದಲು ಅದನ್ನು ವಿಮರ್ಶೆಗೆ ಒಳಪಡಿಸಬೇಕು. ಕೃಷಿ ಇಲಾಖೆಯವರ ಸಲಹೆಗಳನ್ನು ಪಡೆಯಬೇಕು\’ ಎಂದು ಕರೆ ನೀಡಿದರು.
`ಪಟ್ಟಣದ ಅಂಚಿನ ಭತ್ತದ ಗದ್ದೆಗಳು ವಸತಿ ನಿವೇಶನಗಳಾಗುತ್ತಿದ್ದು, ಹೀಗೆ ಭತ್ತದ ಕಣಜಗಳು ಕಣ್ಮರೆಯಾದರೆ ಆಹಾರ ಬೆಳೆಗಳಿಗೆ ಅಪಾಯವಿದೆ. ಭವಿಷ್ಯದಲ್ಲಿ ಊಟಕ್ಕೂ ಅನ್ನ ಸಿಗದ ಪರಿಸ್ಥಿತಿ ಎದುರಾಗಬಹುದು\’ ಎಂದು ಅವರು ಕಳವಳ ವ್ಯಕ್ತಪಡಿಸಿದರು. `ಕೃಷಿ ಇಲಾಖೆ ನಶಿಸುತ್ತಿರುವ ಭತ್ತದ ತಳಿಗಳನ್ನು ಸಂಗ್ರಹಿಸಿ ಅದನ್ನು ಉಳಿಸುವ ಕೆಲಸ ಮಾಡುತ್ತಿದೆ\’ ಎಂದು ಆತ್ಮ ಕಮಿಟಿ ಪ್ರಮುಖ ಎಂ ಜಿ ಭಟ್ಟ ತಿಳಿಸಿದರು. ಪ್ರಮುಖರಾದ ನರಸಿಂಹ ಬೋಳಪಾಲ, ದತ್ತಾತ್ರೇಯ ಹಂಗಾರಿ, ಮಂಜುನಾಥ ಭಟ್ಟ ಕೊಂಬೆಪಾಲ್ ಇತರರು ಇದ್ದರು. ರಾಮಚಂದ್ರ ಹಂಗಾರಿ ನಿರ್ವಹಿಸಿದರು.