ಅಂಕೋಲಾ ಪೇಟೆಯಲ್ಲಿ ಹಣ್ಣು-ತರಕಾರಿ ವ್ಯಾಪಾರಸ್ಥರ ನಡುವೆ ಮಾರಾಮಾರಿ ನಡೆದಿದ್ದು, ತಡೆಯಲು ಹೋದ ಪೊಲೀಸ್ ಸಿಬ್ಬಂದಿ ಮಾತನ್ನು ಅವರು ಕೇಳಿಲ್ಲ.
ಜುಲೈ 7ರ ಸಂಜೆ ಅಂಕೋಲಾದ ಚೋಟು ಬೇಕರಿ ಎದುರು ಈ ಹೊಡೆದಾಟ ನಡೆದಿದೆ. ವ್ಯಾಪಾರಸ್ಥರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದು, ಒಬ್ಬರಿಗೊಬ್ಬರು ಥಳಿಸಿಕೊಂಡಿದ್ದಾರೆ. ಹೊಡೆದಾಟ ನಡೆಸಿದ ನಾಲ್ವರು ಒಂದೇ ಊರಿನ ಒಂದೇ ಸಮುದಾಯದವರಾಗಿದ್ದಾರೆ.
ಕಾಕರಮಠದ ತರಕಾರಿ ವ್ಯಾಪಾರಿ ರಿಯಾಜ್ ಚರ್ಕಿ, ಅಲಿಸಾಬ್ ಅಲಿ ಹಾಗೂ ಹಣ್ಣಿನ ವ್ಯಾಪಾರಿ ಸೈದು ಚರ್ಕಿ, ಶಾದೀಬ ಕಿತ್ತೂರು ಪರಸ್ಪರ ಹೊಡೆದಾಟ ನಡೆಸಿದವರು. ಸಾರ್ವಜನಿಕರ ಶಾಂತಿಗೆ ತೊಂದರೆ ಆಗುವ ನಿಟ್ಟಿನಲ್ಲಿ ಅವರೆಲ್ಲರೂ ಬೈಗುಳದ ಜೊತೆ ಹೊಡೆದಾಡುತ್ತಿದ್ದರು. ಇದನ್ನು ನೋಡಿದ ಪೊಲೀಸ್ ಸಿಬ್ಬಂದಿ ಮಹದೇವ ಸಿದ್ದಿ ಅವರಿಗೆ ಬುದ್ದಿ ಹೇಳಿದರು.
ಆದರೆ, ಪೊಲೀಸರ ಮಾತನ್ನು ಕೇಳುವ ಸ್ಥಿತಿಯಲ್ಲಿ ಆ ನಾಲ್ವರು ಇರಲಿಲ್ಲ. ಚೋಟು ಬೇಕರಿ ಎದುರು ಮಾರಾಮಾರಿ ನೋಡಿದ ಮಹಾದೇವ ಸಿದ್ದಿ ಅದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಗಲಾಟೆ ಮಾಡದಂತೆ ಸೂಚಿಸಿದ ಪೊಲೀಸರಿಗೆ ಅವರೆಲ್ಲರು ನಿಂದಿಸಿದರು.
ಶಾoತಿ ಕೆದಡುವ ಪ್ರಯತ್ನ ಮಾಡಿದ ಕಾರಣ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಆ ನಾಲ್ವರು ವ್ಯಾಪಾರಿಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ. ಅವರ ಹೊಡೆದಾಟಕ್ಕೆ ಕಾರಣ ಅವರಿಗೆ ಮಾತ್ರ ಗೊತ್ತು.
