ಹೊನ್ನಾವರ: ಪ್ರಕೃತಿ ವಿಕೋಪ, ಅತಿವೃಷ್ಟಿ ಅನಾಹುತಗಳ ತಡೆಗೆ ಪ್ರಾರ್ಥಿಸಿ ಉಪ್ಲೆ ಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಮಹಾಕಾಲ ಮೃತ್ಯುಂಜಯ ಯಜ್ಞ ನಡೆದಿದ್ದು, ಇದರಲ್ಲಿ ಭಾಗವಹಿಸಿದ ವೈದಿಕರು ಯಾವುದೇ ಸಂಭಾವನೆ ಪಡೆಯಲಿಲ್ಲ.
ಶ್ರೀ ವೇದೋಪಾಸನ ಪ್ರತಿಷ್ಠಾನ ಟ್ರಸ್ಟ್ ಈ ಕಾರ್ಯಕ್ರಮ ಆಯೋಜಿಸಿತ್ತು. ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮಕ್ಕೆ ಹಾಜರಾದ ವೈದಿಕರು ತಾವೇ ಸ್ವತಃ ಹಣಕಾಸಿನ ನೆರವು ನೀಡಿ ಯಜ್ಞದಲ್ಲಿ ಭಾಗವಹಿಸಿದರು. ಎರಡು ದಿನಗಳ ಕಾಲ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಗಣಪತಿ ಹವನ, ಶತರುದ್ರಾರಾಧನೆ, ನವಗ್ರಹ ಹವನ ಮೊದಲಾದ ಹೋಮಗಳು ಹಾಗೂ ದೇವತಾ ಆರಾಧನೆ ನಡೆಯಿತು.