ಸಾಮಾಜಿಕ ಜಾಲತಾಣದ ಹೋರಾಟಗಾರರಿಗೆ ಕೊನೆಯ ಎಚ್ಚರಿಕೆ!
ಅತಿಯಾದ ಮಳೆ, ಗುಡ್ಡ ಕುಸಿತ, ನೆರೆ ಪ್ರವಾಹ ಹಾಗೂ ಅನೇಕ ಸಾವು-ನೋವುಗಳ ನಡುವೆ ಉತ್ತರ ಕನ್ನಡ ಜಿಲ್ಲಾಡಳಿತ ಜನರ ಜೀವ ರಕ್ಷಣೆಗಾಗಿ ಶ್ರಮಿಸುತ್ತಿದೆ. ಈ ನಡುವೆ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ. ಸುಳ್ಳು ಸುದ್ದಿಗಳನ್ನು ನಂಬಿದ ಜನ ಅನಗತ್ಯವಾಗಿ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸಿಕ್ಕಿಬಿದ್ದವರಿಗೆ ಕಠಿಣ ಶಿಕ್ಷೆ ವಿಧಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಕೆಲವರು ಬೇರೆ ಬೇರೆ ಪ್ರದೇಶದ ಫೋಟೋ ಹಾಗೂ ಹಳೆಯ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊoಡು ಜನರನ್ನು ಹೆದರಿಸುತ್ತಿದ್ದಾರೆ. ಗುಡ್ಡ ಕುಸಿತ, ರಸ್ತೆ ಕುಸಿತ, ಶಾಲೆಗೆ ರಜೆ ವಿಷಯವಾಗಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ವಿವಿಧ ಮಾಧ್ಯಮ ಹಾಗೂ ಜಿಲ್ಲಾಡಳಿತದ ಅಧಿಕೃತ ಪತ್ರಗಳನ್ನು ತಿದ್ದುಪಡಿ ಮಾಡಿ ಹರಿಬಿಟ್ಟ ನಿದರ್ಶನಗಳು ವರದಿಯಾಗಿದೆ. ಜನತೆಗೆ ತಪ್ಪು ಸಂದೇಶ ಹರಿಬಿಡುತ್ತಿರುವ `ಸಾಮಾಜಿಕ ಜಾಲತಾಣ\’ದ ಹೋರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಡಳಿತ ಎಚ್ಚರಿಸಿದೆ.
ಸುಳ್ಳು ಸುದ್ದಿ ಹರಡುವುದರಿಂದ ಸಂತ್ರಸ್ತರು ಆತಂಕಕ್ಕೆ ಒಳಗಾಗುತ್ತಿರುವುದನ್ನು ಮನಗಂಡ ಜಿಲ್ಲಾಡಳಿತ ಅಗಸ್ಟ 2ರಂದು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಯಾವುದೇ ಸಂದೇಶವನ್ನು ಖಚಿತಪಡಿಸಿಕೊಳ್ಳದೇ ಅದನ್ನು ಹರಿಬಿಡಬಾರದು ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.