ಪಂಚ ಗ್ಯಾರಂಟಿ ಯೋಜನೆ ಅಡಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಣ ಕಲ್ಪಿಸಿದೆ. ಆದರೆ, ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಯಲ್ಲಾಪುರ-ಶಿರಸಿ ಮಾರ್ಗದಲ್ಲಿ ಬಸ್ ಸಂಚಾರವೇ ಇಲ್ಲ!
ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ನಿತ್ಯ ಹಲವು ಬಸ್ಸುಗಳು ಸಂಚರಿಸುತ್ತವೆ. ಆದರೆ, ಸ್ಥಳೀಯ ಮಹಿಳಾ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. ಕಾರಣ, ಜಂಬೇಸಾಲು, ಉಪಳೇಶ್ವರ, ಹುತ್ಕಂಡ ಕ್ರಾಸ್ ಮೊದಲಾದ ಸ್ಥಳಗಳಲ್ಲಿ ಬಹುತೇಕ ಬಸ್ಸುಗಳು ನಿಲ್ಲುತ್ತಿಲ್ಲ. ಅದರಲ್ಲಿಯೂ ವಿದ್ಯಾರ್ಥಿಗಳು ಶಾಲೆಗೆ ಹೋಗುವ ಸಮಯ ಹಾಗೂ ಶಾಲೆಯಿಂದ ಮರಳುವ ಸಮಯದಲ್ಲಿ ಅವರಿಗೆ ಅನುಕೂಲವಾಗುವ ರೀತಿ ಸಾರಿಗೆ ನಿಗಮ ಬಸ್ಸುಗಳನ್ನು ಬಿಡುತ್ತಿಲ್ಲ.
`ಪ್ರತಿ ದಿನ ಬೆಳಗ್ಗೆ ಬೆಳಗ್ಗೆ 8.30ರಿಂದ 9ಗಂಟೆ ಅವಧಿಯಲ್ಲಿ ಶಾಲಾ ಮಕ್ಕಳನ್ನು ಯಲ್ಲಾಪುರಕ್ಕೆ ಕರೆದೊಯ್ಯುವ ನಿಟ್ಟಿನಲ್ಲಿ ಬಸ್ಸು ಬಿಡಬೇಕು. ಅದಾದ ನಂತರ ಶಾಲಾ ಮಕ್ಕಳು ಮತ್ತೆ ಮನೆಗೆ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಸಂಜೆ 4.30ರಿಂದ 5ಗಂಟೆ ಅವಧಿಯಲ್ಲಿ ಬಸ್ ಬಿಡಬೇಕು’ ಎಂಬುದು ಸ್ಥಳೀಯರ ಬೇಡಿಕೆ. ಆದರೆ, ಈ ಬೇಡಿಕೆಯನ್ನು ಕೆಎಸ್‌ಆರ್‌ಟಿಸಿ ಈವರೆಗೂ ಈಡೇರಿಸಿಲ್ಲ. ಪರಿಣಾಮ ಶಾಲಾ ಮಕ್ಕಳು ಬಸ್ಸಿಗಾಗಿ ಅನಗತ್ಯವಾಗಿ ಕಾಯುವುದು ಅನಿವಾರ್ಯವಾಗಿದೆ.
ಬಿಜೆಪಿಯಿಂದ ಹೋರಾಟ:
ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಟ್ಟಿನಲ್ಲಿ ಬಿಜೆಪಿ ಚಂದ್ಗುಳಿ ಘಟಕದವರು ಹೋರಾಟಕ್ಕೆ ನಿರ್ಧರಿಸಿದ್ದಾರೆ. `ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಸಿಗದ ಕಾರಣ ಮಕ್ಕಳು ಕಂಡ ಕಂಡ ವಾಹನಗಳಿಗೆ ಕೈ ಮಾಡುತ್ತಿದ್ದಾರೆ. ಇದರಿಂದ ಅಪಾಯದ ಸಾಧ್ಯತೆ ಹೆಚ್ಚಿದ್ದು, ಬೇಡಿಕೆಗೆ ಅನುಗುಣವಾಗಿ ಬಸ್ ಸೌಕರ್ಯ ಕಲ್ಪಿಸದೇ ಇದ್ದರೆ ಹೋರಾಟ ನಿಶ್ಚಿತ’ ಎಂದು ಬಿಜೆಪಿಗರು ಹೇಳಿದ್ದಾರೆ.
`ಜುಲೈ 15ರ ಒಳಗೆ ಬೇಡಿಕೆ ಈಡೇರದೇ ಇದ್ದರೆ ಜುಲೈ 19ರಂದು ಬೆಳಗ್ಗೆ 8 ಗಂಟೆಯಿAದ ಉಪಳೇಶ್ವರದಲ್ಲಿ ರಸ್ತೆ ತಡೆ ನಡೆಸಿ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್, ಸಾರಿಗೆ ಅಧಿಕಾರಿ ಹಾಗೂ ಪೊಲೀಸರಿಗೆ ನಾಗರಾಜ ಕವಡಿಕೆರೆ, ಅಪ್ಪು ಆಚಾರಿ, ಸುಬ್ರಹ್ಮಣ್ಯ ಭಟ್ಟ ಮೊದಲಾದವರು ಎಚ್ಚರಿಕೆಯ ಪತ್ರ ನೀಡಿದ್ದಾರೆ. ಡಿ ಶಂಕರ್ ಭಟ್ಟ ಅವರು ಹೋರಾಟಕ್ಕೆ ಕೈ ಜೋಡಿಸಿದ್ದಾರೆ.





Discussion about this post