ಭಟ್ಕಳ ನಗರವನ್ನು ಸ್ಪೋಟಿಸುವುದಾಗಿ ಪೊಲೀಸ್ ಠಾಣೆಗೆ ತಳ್ಳಿ ಅರ್ಜಿ ಬಂದಿದೆ. ಇಮೇಲ್ ಮೂಲಕ ಬಂದ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲಾ ಕಡೆ ಶೋಧ ನಡೆಸಿದ್ದಾರೆ.
ಮುಂದಿನ 24 ಗಂಟೆಯ ಒಳಗೆ ಭಟ್ಕಳ ಸ್ಪೋಟಿಸುವುದಾಗಿ ಸರ್ಕಾರದ ಅಧಿಕೃತ ಮೇಲ್ ವಿಳಾಸಕ್ಕೆ ಎರಡು ಇಮೇಲ್ ಬಂದಿದೆ. ಅದನ್ನು ಸ್ವೀಕರಿಸಿದ ಪೊಲೀಸರು ಮೇಲ್ ಮಾಡಿದ ವ್ಯಕ್ತಿಯ ವಿಳಾಸ ಜಾಲಾಡಿದ್ದಾರೆ. ಕಣ್ಣನ್ ಗುರುಸ್ವಾಮಿ ಎಂಬ ವ್ಯಕ್ತಿಯಿಂದ ಇಮೇಲ್ ಬಂದಿದ್ದು, ಆತನ ಹುಡುಕಾಟವನ್ನು ನಡೆಸಿದ್ದಾರೆ.
ಜುಲೈ10 ರ ಬೆಳಗ್ಗೆ 7.24ಕ್ಕೆ ಇ-ಮೇಲ್ ರವಾನೆಯಾಗಿದೆ. ಮೊದಲು ಇಮೇಲ್’ನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಜಿಲ್ಲಾ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದರು. ಅವರು ಆಗಮಿಸಿ ನಗರದ ಪ್ರಮುಖ ಪ್ರದೇಶದಲ್ಲಿ ತಪಾಸಣೆ ಮಾಡಿದರು. ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳದಲ್ಲಿ ಬಾಂಬ್ ಹುಡುಕಾಟ ನಡೆಯಿತು.
ಆದರೆ, ಎಲ್ಲಿಯೂ ಬಾಂಬ್ ಸಿಗಲಿಲ್ಲ. ಸುಳ್ಳು ಸುದ್ದಿ ಹೇಳಿ ಬೆದರಿಸಿದ ವ್ಯಕ್ತಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.
