ಬಾಲ್ಯದಲ್ಲಿಯೇ ತಂದೆ-ತಾಯಿ ಕಳೆದುಕೊಂಡು ಅಜ್ಜಿ ಜೊತೆ ವಾಸವಾಗಿದ್ದ ಶಿವರಾಜ ಏಕಾಏಕಿ ಮನೆಬಿಟ್ಟು ಹೋಗಿದ್ದು, ಅವರ ಅಜ್ಜಿ ಮೊಮ್ಮಗನ ಹುಡುಕಾಟದಲ್ಲಿದ್ದಾರೆ. ಎಷ್ಟು ಹುಡುಕಿದರೂ ಶಿವರಾಜನ ಸುಳಿವು ಸಿಗದ ಕಾರಣ ಇದೀಗ ಪೊಲೀಸರ ಮೊರೆ ಹೋಗಿದ್ದಾರೆ.
ಕಲ್ಲಪ್ಪ ಹಾಗೂ ರತ್ಮ ದಂಪತಿಗೆ ಮೂವರು ಮಕ್ಕಳು. ಆ ಮಕ್ಕಳೆಲ್ಲರೂ ಸಣ್ಣವರಿರುವಾಗಲೇ ಕಲ್ಲಪ್ಪ ಹಾಗೂ ರತ್ನ ಸಾವನಪ್ಪಿದ ಕಾರಣ ಯಲ್ಲವ್ವಾ ಬೋವಿವಡ್ಡರ್ ಅವರು ಆ ಮಕ್ಕಳನ್ನು ಸಾಕಿದ್ದರು. ಶಿರಸಿಯ ಮುನಜವಳ್ಳಿ ಬಳಿಯ ಗಣೇಶನಗರ ಚೌಡೇಶ್ವರಿ ಕಾಲೋನಿಯಲ್ಲಿ ಯಲ್ಲವ್ವ ಅವರ ಜೊತೆ ವೀರಣ್ಣ, ಶಿವರಾಜ, ಪೂಜಾ ಅವರು ವಾಸವಾಗಿದ್ದರು.
ಈ ಪೈಕಿ ಶಿವರಾಜ ಬೋವಿವಡ್ಡರ್ (21) ಅವರು ಕಟ್ಟಡ ಕಾರ್ಮಿಕರಾಗಿ ದುಡಿಯುತ್ತಿದ್ದರು. ಬಾಲ್ಯದಿಂದಲೂ ಕಷ್ಟದ ಜೀವನ ನಡೆಸಿದ್ದ ಅವರು ಮೋಜು-ಮಸ್ತಿಗೆ ಸಮಯ ಕೊಡುತ್ತಿರಲಿಲ್ಲ. ಅವರ ಅಜ್ಜಿ ಯಲ್ಲವ್ವಾ ಸಹ ಮೊಮ್ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದ್ದರು. ಈ ನಡುವೆ ಚೌಡೇಶ್ವರಿ ಕಾಲೋನಿಯಲ್ಲಿಯೇ ವಾಸವಾಗಿದ್ದ ಸುನೀಲ ಕುರುಬರ್ ಅವರ ಬಳಿ ಶಿವರಾಜ ಬೋವಿವಡ್ಡರ್ ಗೌಂಡಿ ಕೆಲಸಕ್ಕೆ ಹೋಗುತ್ತಿದ್ದರು.
ಜುಲೈ 9ರಂದು ಕೂಲಿ ಹಣ ತರುವುದಾಗಿ ಹೇಳಿ ಮನೆಯಿಂದ ಹೊರಟ ಶಿವರಾಜ ಬೋವಿವಡ್ಡರ್ ಅವರು ಸುನೀಲ ಕುರುಬರ್ ಅವರು ನೀಡಿದ ಹಣ ಸ್ವೀಕರಿಸಿದರು. ಅದಾದ ನಂತರ ಸ್ನೇಹಿತರ ಜೊತೆಗೂಡಿ ಅಪರೂಪಕ್ಕೆ ಒಮ್ಮೆ ಪಾರ್ಟಿ ಮಾಡಿದರು. ಶಿವರಾಜ ಬೋವಿವಡ್ಡರ್ ಅವರು ಪಾರ್ಟಿ ಮಾಡಿ ಹಣ ಹಾಳು ಮಾಡಿದ ವಿಷಯ ಅಜ್ಜಿಗೆ ಗೊತ್ತಾಯಿತು. ಆ ವಿಷಯ ಅಜ್ಜಿಗೆ ಗೊತ್ತಾಗಿರುವುದು ಶಿವರಾಜ ಅವರ ಅರಿವಿಗೂ ಬಂದಿತು.
ಅಜ್ಜಿಯ ಬುದ್ಧಿಮಾತು-ಬೈಗುಳ ನೆನೆಪಿಸಿಕೊಂಡ ಶಿವರಾಜ ಬೋವಿವಡ್ಡರ್ ಮತ್ತೆ ಮನೆಗೆ ಹೋಗಲಿಲ್ಲ. ಪಾರ್ಟಿ ಮಾಡಿದ ವಿಷಯ ಮನೆಯಲ್ಲಿ ಗೊತ್ತಾಯಿತು ಎಂಬ ಕಾರಣದಿಂದ ಅವರು ಊರುಬಿಟ್ಟು ಪರಾರಿಯಾಗಿದ್ದು, ಅಜ್ಜಿ ಮನಸ್ಸು ಸಮಾಧಾನವಾದರೂ ಶಿವರಾಜ ಬೋವಿವಡ್ಡರ್ ಮನೆಗೆ ಮರಳಿಲ್ಲ. ಇದರಿಂದ ಆತಂಕಗೊoಡ ಯಲ್ಲವ್ವ ಬೋವಿವಡ್ಡರ್ ಅವರು ಶಿವರಾಜ ಬೋವಿವಡ್ಡರ್ ಅವರ ಹುಡುಕಾಟ ನಡೆಸಿದ್ದಾರೆ. `ಮಗ.. ಎಲ್ಲಿದ್ದರೂ ಮನೆಗೆ ಬಾ’ ಎಂದು ಕರೆಯುತ್ತಿದ್ದಾರೆ.
ಶಿವರಾಜ ಬೋವಿವಡ್ಡರ್ ಎಲ್ಲಿಯೂ ಸಿಗದ ಕಾರಣ ಯಲ್ಲವ್ವ ಅವರು ಸಹಾಯ ಕೇಳಿ ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಿವರಾಜ ಬೋವಿವಡ್ಡರ್ ಅವರ ಹುಡುಕಾಟ ಶುರು ಮಾಡಿದ್ದಾರೆ.
