ಅಂಕೋಲಾದ ಕೇಣಿಯಲ್ಲಿ ಬಂದರು ನಿರ್ಮಾಣ ಗುತ್ತಿಗೆಪಡೆದ JSW ಕಂಪನಿ ಅಧಿಕಾರಿಯೊಬ್ಬರು ಕಾರವಾರಕ್ಕೆ ಬಂದಾಗ ಡೈರಿಯೊಂದನ್ನು ಬಿಟ್ಟು ಹೋಗಿದ್ದು, ಅದರಲ್ಲಿ ಅಂಕಿ-ಅoಶಗಳ ಜೊತೆ ಬರೆಯಲಾದ ಕೆಲ ಹೆಸರುಗಳು ಸಂಚಲನ ಮೂಡಿಸಿದೆ.
ಪ್ರಮುಖವಾಗಿ ಈ ಡೈರಿಯಲ್ಲಿ BJP ಎಂಬ ಹೆಸರಿದೆ. ಜೊತೆಗೆ ಪತ್ರಕರ್ತರು, ಸಾಹಿತಿಗಳು, ಬರಹಗಾರರು ಎಂದು ಪುಟವೊಂದರಲ್ಲಿ ಬರೆಯಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈಚೆಗೆ ಅಸ್ತಿತ್ವಕ್ಕೆ ಬಂದ ಅಭಿವೃದ್ಧಿ ಒಕ್ಕೂಟ ಹಾಗೂ ಕೇಣಿ ಬಂದರು ಯೋಜನೆ ಗುತ್ತಿಗೆಪಡೆದ JSW ಕಂಪನಿಗೆ ಯಾವುದೇ ಸಂಬOಧವಿಲ್ಲ’ ಎಂದು ಒಕ್ಕೂಟದವರು ಹೇಳಿದ್ದು, ಇದೇ ಮಾತನ್ನು ಪುನರುಚ್ಚರಿಸಿದ್ದರು. ಆದರೆ, ಅಧಿಕಾರಿಯ ಡೈರಿಯಲ್ಲಿ ಆ ಒಕ್ಕೂಟದ ಹೆಸರು ಹಾಗೂ ಪದಾಧಿಕಾರಿಗಳ ವಿವರ ಸಹ ದಾಖಲಾಗಿದೆ.
ಡೈರಿಯ ಬಹುತೇಕ ಪುಟಗಳಲ್ಲಿ ಲೆಕ್ಕಾಚಾರದ ವಿವರಗಳಿವೆ. ಅಲ್ಲಲ್ಲಿ ಶೇ 10ರ ಅಡ್ವಾನ್ಸ್ ಎಂದು ಬರೆಯಲಾಗಿದೆ. ಇನ್ನೊಂದು ಪುಟದಲ್ಲಿ 11 ಲಕ್ಷದ ಲೆಕ್ಕಾಚಾರವಿದ್ದು, 6ಲಕ್ಷದಷ್ಟು ಬಾಕಿಯಿರುವ ವಿವರ ನಮೂದಿಸಲಾಗಿದೆ. ಶಿರಸಿ, ಯಲ್ಲಾಪುರ, ಮುಂಡಗೋಡು ಸೇರಿ ವಿವಿಧ ತಾಲೂಕಿನ ಹೆಸರು, ಆ ಭಾಗದ ಕೆಲ ವ್ಯಕ್ತಿಗಳ ಹೆಸರು ಫೋನ್ ನಂ ಸಹ ಡೈರಿಯಲ್ಲಿದೆ. ಡೈರಿಯಲ್ಲಿ ಬರೆಯಲಾದ ಹೆಸರು ಹಾಗೂ ಫೋನ್ ನಂ ಹೋರಾಟಗಾರರು, ಸಂಘಟನೆ ಹಾಗೂ ಅಧಿಕಾರಿಗಳ ಹೆಸರಿಗೆ ತಾಳೆಯಾಗುತ್ತಿವೆ.
ಇದರೊಂದಿಗೆ ಮೀನುಗಾರ ಸಂಘಟನೆ ಹಾಗೂ ಅವುಗಳ ಅಧ್ಯಕ್ಷ-ಕಾರ್ಯದರ್ಶಿಗಳ ಹೆಸರನ್ನು ಫೋನ್ ನಂ ಜೊತೆ ಬರೆಯಲಾಗಿದೆ. ಸರ್ಕಾರಿ ಅಧಿಕಾರಿಗಳ ಹೆಸರಿನ ಜೊತೆ ಫೋನ್ ನಂ ಸಹ ಡೈರಿಯಲ್ಲಿದೆ. `ಅಂದುಕೊ0ಡಿರುವ ಲೈಫೇ ಬೇರೆ. ನಿಜವಾದ ಲೈಪು ಬೇರೆ’ ಎಂಬ ಸಾಲುಗಳನ್ನು ಈ ಡೈರಿಯ ಪುಟಗಳು ಒಳಗೊಂಡಿದೆ.
ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಸಮುದಾಯಗಳಾದ ನಾಡವರು, ಕೋಮಾರಪಂಥ, ನಾಮದಾರಿ, ಹಾಲಕ್ಕಿ ಒಕ್ಕಲಿಗ, ಮೀನುಗಾರ ಎಂಬ ಜಾತಿ ಲೆಕ್ಕಾಚಾರದ ವಿಷಯವೂ ಡೈರಿಯಲ್ಲಿದೆ. ಈಚೆಗೆ ಕಾರವಾರದಲ್ಲಿ JSW ಕಂಪನಿ ಸುದ್ದಿಗೋಷ್ಟಿ ನಡೆಸಿದ್ದು, ಈ ವೇಳೆ ಆ ಡೈರಿ ಕಣ್ಮರೆಯಾಗಿತ್ತು. ಡೈರಿ ಹುಡುಕಾಟಕ್ಕಾಗಿ ಕಂಪನಿ ಅಧಿಕಾರಿಗಳು ಸಾಕಷ್ಟು ಸಾಹಸ ನಡೆಸಿದ್ದರು. ಕೊನೆಗೆ ಪತ್ರಕರ್ತರೇ ಅದನ್ನು ಹುಡುಕಿ ಅಧಿಕಾರಿಗಳಿಗೆ ಕೊಟ್ಟಿದ್ದರು.
ಆ ಡೈರಿ ತಮ್ಮದು ಎಂದು ಕಂಪನಿಯ ಭರಮಪ್ಪ ಕುಂಟಗೇರಿ ಅವರು ಒಪ್ಪಿಕೊಂಡಿದ್ದಾರೆ. ಆದರೆ, ಅದರಲ್ಲಿ ಬರೆಯಲಾದ ವಿಷಯಕ್ಕೆ ವಿಶೇಷ ಅರ್ಥವಿಲ್ಲ ಎಂದು ಹೇಳಿದ್ದಾರೆ. ಡೈರಿ ರಹಸ್ಯದ ಬಗ್ಗೆ ಮಾಹಿತಿ ಕೋರಿ uknews9.com ಕಂಪನಿಗೆ ಪತ್ರ ಬರೆದಿದೆ. ಅಧಿಕೃತ ಉತ್ತರಕ್ಕಾಗಿ ಕಾಯಲಾಗುತ್ತಿದೆ.
