ಕುಮಟಾ: `ಕಾಲಪ್ರಜ್ಞೆ ಮತ್ತು ದೇಶಪ್ರಜ್ಞೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಜೀವನ ಸಾಧ್ಯ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ನುಡಿದರು.
ಗೋಕರ್ಣದ ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುರ್ಮಾಸ್ಯ ಕೈಗೊಂಡಿರುವ ಅವರು ಭಾನುವಾರ ಆಶೀರ್ವಚನ ನೀಡಿ `ಆಯಾ ದೇಶ, ಆಯಾ ಕಾಲಕ್ಕೆ ತಕ್ಕಂತೆ ನಮ್ಮ ಜೀವನವನ್ನು ಬದಲಾಯಿಸಿಕೊಳ್ಳಬೇಕು. ಊಟ, ನಿದ್ದೆ, ಎಚ್ಚರ ಹೀಗೆ ಎಲ್ಲಕ್ಕೂ ಒಂದು ನಿರ್ದಿಷ್ಟ ಕಾಲವಿದೆ. ಯುಕ್ತಾಹಾರ ವಿಹಾರ, ಸ್ವಪ್ನ ಎಲ್ಲವೂ ಅಗತ್ಯ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಬಣ್ಣಿಸಿದ್ದಾನೆ\’ ಎಂದರು.
`ಭಾರತೀಯರು ಕಾಲವನ್ನು ನೋಡಿದ ರೀತಿ ಅತ್ಯದ್ಭುತ. ಪ್ರತಿಯೊಂದು ಘಟನೆಗಳಿಗೆ ಕಾಲ ಕನ್ನಡಿ ಹಿಡಿಯುತ್ತದೆ. ಅದರನ್ನು ಅರಿಯುವ ಸಾಧನವೇ ಜ್ಯೋತಿಷ್ಯ. ಭಾರತೀಯ ಪರಿಭಾಷೆಯಲ್ಲಿ ಫಲ ನೀಡುವಂಥದ್ದು ಗ್ರಹ. ವಿಜ್ಞಾನದ ಪರಿಭಾಷೆಗೂ ನಮ್ಮ ಭಾರತೀಯ ಪರಿಭಾಷೆಗೂ ವ್ಯತ್ಯಾಸವಿದೆ\’ ಎಂದು ವಿವರಿಸಿದರು.
`ಸೂರ್ಯಚಂದ್ರರು ದೊಡ್ಡದಾಗಿ ಗೋಚರಿಸಿದರೆ, ಉಳಿದ ಐದು ಗ್ರಹಗಳಿಗೆ ತಾರಾಗ್ರಹಗಳೆನ್ನುತ್ತೇವೆ. ರಾಹುಕೇತುಗಳು ಛಾಯಾಗ್ರಹಗಳು. ಶುಕ್ರ ಹೆಚ್ಚು ತೇಜೋಮಯವಾಗಿ ಗೋಚರಿಸುತ್ತಾನೆ. ಗ್ರಹಗಳು ನಮ್ಮ ಬದುಕಿನ ಮೇಲೆ ದೊಡ್ಡ ಪ್ರಭಾವವನ್ನು ಬೀರುತ್ತದೆ. ಆದರೆ ಒಂದೊAದು ಕಡೆಗೆ ಇದ್ದಾಗ ಒಂದೊAದು ಸಂದೇಶವನ್ನು ನೀಡುತ್ತವೆ. ಅಂತರಿಕ್ಷದ ಬೇರೆ ಬೇರೆ ಭಾಗಗಳನ್ನು ರಾಶಿ ಎನ್ನುತ್ತೇವೆ\’ ಎಂದರು.