ಕುಮಟಾದ ಕಟ್ಟಡವೊಂದರಲ್ಲಿ ಬಗೆ ಬಗೆಯ ಖಾದ್ಯ ಸಿದ್ಧಪಡಿಸಿ ವಿವಿಧ ಬೇಕರಿಗಳಿಗೆ ಕೊಡಲಾಗುತ್ತದೆ. ಪ್ರತಿಷ್ಠಿತ ಹೊಟೇಲುಗಳಿಗೆ ಸಹ ಇಲ್ಲಿನ ತಿನಿಸು ಹೋಗಲಿದ್ದು, ಆಹಾರ ತಯಾರಿಕಾ ಘಟಕ ನೋಡಿದರೆ ಮೂರು ದಿನ ಊಟ ಸೇರುವುದಿಲ್ಲ!
ಅತ್ಯಂತ ಗಲೀಜು ಪ್ರದೇಶದಲ್ಲಿ ಸಮೋಸ, ಕುರುಕುರೆ, ಬ್ರೆಡ್, ಖಾರಾ-ಚೂಡಾ ಮೊದಲಾದ ತಿನಿಸುಗಳನ್ನು ತಯಾರಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡಿ ಎಂದು ಅಲ್ಲಿನ ಜನ ಸಾಕಷ್ಟು ಬಾರಿ ಹೇಳಿದರೂ ಅದನ್ನು ಯಾರೂ ಕಿವಿಗೆ ಹಾಕಿಕೊಂಡಿಲ್ಲ. ಸಂಪೂರ್ಣ ಅಶುಚಿತ್ವ ಹಾಗೂ ಅವೈಜ್ಞಾನಿಕ ರೀತಿ ಇಲ್ಲಿ ತಿನಿಸುಗಳನ್ನು ಸಿದ್ದಪಡಿಸಿ ಮಳಿಗೆಗಳಿಗೆ ನೀಡಲಾಗುತ್ತಿದ್ದು, ಅಂಥ ಆಹಾರ ಸೇವಿಸಿದವರಿಗೆ ರೋಗ ಬರುವುದು ನಿಶ್ಚಿತ.
ಕುಮಟಾದ ಅಳ್ವೆಕೋಡಿ ಪ್ರವೇಶಿಸುತ್ತಿದ್ದಂತೆ ಖಾದ್ಯ ತಯಾರಿಕಾ ಕೇಂದ್ರದ ಗಬ್ಬು ಸ್ವಾಗತಿಸುತ್ತದೆ. ಆ ಖಾದ್ಯ ತಯಾರಾಗುವ ಜಾಗದ ಬಳಿ ತೆರಳಿದರೆ ವಾಕರಿಕೆ ಬರುತ್ತದೆ. ಅಳ್ವೆಕೋಡಿ ರಾಜ್ಯ ಹೆದ್ದಾರಿ ಪಕ್ಕ ನಿಂತ ನೀರಿನಲ್ಲಿ ಮೊಟ್ಟೆ ಕೊಳತಿರುವುದು ಕಾಣಿಸುತ್ತದೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಹ ಅಲ್ಲಿಯೇ ಎಸೆಯಲಾಗಿದೆ. ಬೇಕರಿ ಉತ್ಪನ್ನ ತಯಾರಿಕೆಗೆ ಬಳಸುವ ಹಿಟ್ಟುಗಳನ್ನು ಸಹ ಅಲ್ಲಿ ಎಸೆಯಲಾಗಿದ್ದು, ಈ ಎಲ್ಲದರ ಮಿಶ್ರಣದಿಂದ ಸೊಳ್ಳೆಗಳ ಉತ್ಪಾದನಾ ಕೇಂದ್ರ ಸೃಷ್ಠಿಯಾಗಿದೆ.
ಈ ಬೇಕರಿ ಉತ್ಪನ್ನ ತಯಾರಿಕಾ ಘಟಕದ ಕೂಗಳತೆ ದೂರದಲ್ಲಿ ಗ್ರಾಮ ಪಂಚಾಯತ ಕಚೇರಿಯಿದೆ. ಆದರೆ, ಅಲ್ಲಿನ ಅಧಿಕಾರಿಗಳು ಈ ಘಟಕದ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಸ್ವಚ್ಛತೆ ಕಾಪಾಡುವಂತೆ ಅಲ್ಲಿನವರಿಗೆ ನೋಟಿಸ್ ಸಹ ನೀಡಿದ ನಿದರ್ಶನಗಳಿಲ್ಲ. ಗ್ರಾಮ ಪಂಚಾಯತ ಉಪಾಧ್ಯಕ್ಷೆ ಕಮಲಾ ಗಾವಡಿ ಅವರು ನೂರಾರು ಬಾರಿ ಬೇಕರಿ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಗ್ರಾ ಪಂ ಮಹಿಳಾ ಸದಸ್ಯೆಯ ಧ್ವನಿ ಅಲ್ಲಿನವರಿಗೆ ಕೇಳಿಸುತ್ತಿಲ್ಲ.
ಈ ಹಿನ್ನಲೆ ಕಮಲಾ ಗಾವಡಿ ಅವರು ಭಾನುವಾರ ಜನಸಾಮಾನ್ಯರ ಸಮಾಜಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಅವರ ಜೊತೆ ಮತ್ತೊಮ್ಮೆ ಸ್ಥಳ ಭೇಟಿ ಮಾಡಿದರು. ಅಲ್ಲಿ ಉತ್ಪಾದನೆಯಾದ ತ್ಯಾಜ್ಯ, ನಿರ್ವಹಣೆ ಕೊರತೆ, ಅಶುಚಿತ್ವದ ಸಮಗ್ರ ದಾಖಲೆ ಸಂಗ್ರಹಿಸಿದರು. ಬೇಕರಿ ಉತ್ಪನ್ನಗಳ ಉತ್ಪಾದಕರು ಕಾಲುವೆಯಲ್ಲಿ ತ್ಯಾಜ್ಯ ಎಸೆದು ನೀರು ಸರಿಯಾಗಿ ಹೋಗದಂತೆ ಮಾಡಿರುವುದನ್ನು ಕಾಣಿಸಿದರು.
`ಜಂಕ್ ಪುಡ್ ಸೇವನೆಯಿಂದ ಹೃದಯಘಾತ ಆಗುವ ಪ್ರಕರಣ ಹೆಚ್ಚಾದ ಬಗ್ಗೆ ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ. ಅದಾಗಿಯೂ ಸ್ಥಳೀಯ ಆಡಳಿತ ಅಶುಚಿತ್ವದಲ್ಲಿ ಆಹಾರ ತಯಾರಿಸುವ ಘಟಕದ ವಿರುದ್ಧ ಕ್ರಮ ಜರುಗಿಸಿಲ್ಲ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ದೂರಿದರು.
ಅನುಮತಿಯನ್ನು ಪಡೆದಿಲ್ಲ!
`ಖಾದ್ಯ ತಯಾರಿಕಾ ಘಟಕದವರು ಗ್ರಾಮ ಪಂಚಾಯತ ಅನುಮತಿಪಡೆದಿಲ್ಲ. ಉಪಾಧ್ಯಕ್ಷರು ಸಹ ಈ ಬಗ್ಗೆ ಗ್ರಾಮ ಪಂಚಾಯತಗೆ ದೂರು ನೀಡಿಲ್ಲ. ಅನಧಿಕೃತ ಮಳಿಗೆ ಬಗ್ಗೆ ಕ್ರಮ ಜರುಗಿಸಲಾಗುತ್ತದೆ’ ಎಂದು ಗ್ರಾ ಪಂ ಅಭಿವೃದ್ಧಿ ಅಧಿಕಾರಿ ಪ್ರಜ್ಞಾ ಅವರು ಫೋನ್ ಮಾಡಿ ತಿಳಿಸಿದರು.
