ಉತ್ತಮ ಮಳೆ ಹಾಗೂ ಬೆಳೆಗಾಗಿ ಪ್ರಾರ್ಥಿಸುವ ಉದ್ದೇಶದಿಂದ ಅನಾಧಿಕಾಲದಿಂದಲೂ ಹಾಲಕ್ಕಿ ಒಕ್ಕಲಿಗರಲ್ಲಿ ಮಹಿಳೆಯೊಂದಿಗೆ ಮಹಿಳೆಯನ್ನು ಮದುವೆ ಮಾಡುವ ಆಚರಣೆಯಿದ್ದು, ಭಾನುವಾರ ಸಂಜೆಯ ಮುಹೂರ್ತದಲ್ಲಿ ಇಬ್ಬರು ಮಹಿಳೆಯರು ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದರು.
`ದಾದುಮ್ಮನ ಮದುವೆ\’ ಎಂದು ಕರೆಯುವ ಈ ಸಂಪ್ರದಾಯ ಗೋಕರ್ಣ ಬಳಿಯ ತಾರಿಮಕ್ಕಿಯಲ್ಲಿ ನಡೆಯಿತು. ಆಷಾಡ ಅಮಾವಾಸ್ಯೆ ಸಂಧ್ಯಾಕಾಲದಲ್ಲಿ ಈ ಮದುವೆ ನಡೆಸುವುದು ನಿಯಮ. ಅದರ ಪ್ರಕಾರ ಕೇತಕಿ ವಿನಾಯಕ ಮತ್ತು ಕರಿ ದೇವರ ಸನ್ನಿಧಿಯಲ್ಲಿ ಹರಿಯುತ್ತಿರುವ ತೊರೆಯ ಆಚೆ – ಈಚೆ ವಧು ಮತ್ತು ವರನ ಕಡೆಯವರು ನಿಂತು ಹೆಣ್ಣು ಕೇಳುವ ಶಾಸ್ತ್ರ ಪೂರೈಸಿದರು. ಜಾನಪದ ಹಾಡುಗಳನ್ನು ಹಾಡುವ ಮೂಲಕ ವಧು – ವಧುವಿನ ಒಪ್ಪಿಗೆ ಪಡೆದು ದೇವರ ಸಾಕ್ಷಿಯಾಗಿ ಮದುವೆ ಮಾಡಿಸಿದರು.
ವಿವಾಹ ವಿಧಿಯಲ್ಲಿನ ಮಂತ್ರ-ತoತ್ರಗಳ ಸ್ಥಾನವನ್ನು ಜಾನಪದ ಹಾಡು ತುಂಬಿಕೊoಡಿತ್ತು. ನಂತರ ಹೊಸ ದಂಪತಿಯನ್ನು ಮೆರವಣಿಗೆ ಮೂಲಕ ಹುಳಸೇಕೇರಿ ಗೌಡರ ಮನೆಗೆ ಕರೆತರಲಾಯಿತು. ಅಲ್ಲಿ ಅನೇಕರು ಉಡುಗರೆ ನೀಡಿ, ದಂಪತಿಗೆ ಹಾರೈಸಿದರು.