ಮಳೆಗಾಲದಲ್ಲಿ ಉಂಟಾಗುವ ಭೂ ಕುಸಿತದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಭೂ ಕುಸಿತ ವಲಯದಲ್ಲಿ ಮಾಹಿತಿ ಅಧಿಕಾರಿಗಳನ್ನು ನೇಮಿಸುವ ಚಿಂತನೆ ನಡೆಸಿದೆ.
ಆ ಮೂಲಕ ಅಲ್ಲಿ ನಡೆಯುವ ಅವಘಡಗಳನ್ನು ತಪ್ಪಿಸಬಹುದು ಎಂಬ ಆಶಯ ಸರ್ಕಾರಕ್ಕಿದೆ. ಭೂ ಕುಸಿತದ ಪರಿಣಾಮ ಅನೇಕ ಅವಾಂತರಗಳು ನಡೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಆ ಪ್ರದೇಶದಲ್ಲಿ ಜನರನ್ನು ನೇಮಿಸಲು ನಿರ್ಧರಿಸಿದೆ. ಭಾರತೀಯ ಭೂವಿಜ್ಞಾನ ಇಲಾಖೆಯ ವರದಿಯಂತೆ ಜಿಲ್ಲೆಯಲ್ಲಿ 439 ಅಪಾಯಕಾರಿ ಭೂಕುಸಿತ ಸ್ಥಳಗಳನ್ನು ಗುರುತಿಸಲಾಗಿದೆ. ಇದರೊಂದಿಗೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಹ ಭೂಕುಸಿತವಾಗುವ ಸ್ಥಳಗಳನ್ನು ಗುರುತಿಸಲಾಗಿದೆ. ಈ ಎರಡು ಸ್ಥಳಗಳ ಪಟ್ಟಿ ಪಡೆದಿರುವ ಜಿಲ್ಲಾಡಳಿತ ಅಲ್ಲಿ ಸೂಕ್ತ ವ್ಯಕ್ತಿಗಳನ್ನು ನೇಮಿಸಲಿದೆ. ಆಯಾ ತಾಲೂಕು ಹಂತದಲ್ಲಿ ವ್ಯಕ್ತಿ ನೇಮಕಕ್ಕೆ ಅವಕಾಶ ನೀಡಿ, ಸೂಚನೆ ನೀಡಿದೆ.
ಅಪಾಯಕಾರಿ ಭೂಕುಸಿತ ಸ್ಥಳಗಳ ಮೇಲೆ ನಿಗಾ ವಹಿಸಲು ನಿಯೋಜಿಸುವ ವ್ಯಕ್ತಿಗಳಿಗೆ ಭಾರತೀಯ ಭೂ ವಿಜ್ಞಾನ ಇಲಾಖೆಯಿಂದ ತರಬೇತಿ ನೀಡಲಾಗುತ್ತದೆ. ನಂತರ ಆಯಾ ಸ್ಥಳಕ್ಕೆ ತೆರಳುವ ಅವರು ಅಲ್ಲಿನ ಸ್ಥಿತಿ-ಗತಿಗಳ ಬಗ್ಗೆ ಕಚೇರಿಗೆ ವರದಿ ಸಲ್ಲಿಸುತ್ತಾರೆ. ಅಂಕೋಲಾ ತಾಲೂಕಿನಲ್ಲಿ 39, ಭಟ್ಕಳದಲ್ಲಿ 1, ಹಳಿಯಾಳದಲ್ಲಿ 13, ಹೊನ್ನಾವರದಲ್ಲಿ 92, ಜೋಯಿಡಾದಲ್ಲಿ 56, ಕಾರವಾರದಲ್ಲಿ 34, ಕುಮಟಾದಲ್ಲಿ 48, ಮುಂಡಗೋಡದಲ್ಲಿ 1, ಸಿದ್ದಾಪುರದಲ್ಲಿ 58, ಶಿರಸಿಯಲ್ಲಿ 59 ಹಾಗೂ ಯಲ್ಲಾಪುರದಲ್ಲಿ 38 ಸೇರಿದಂತೆ ಒಟ್ಟು 439 ಅಪಾಯಕಾರಿ ಗುಡ್ಡ ಕುಸಿತ ಪ್ರದೇಶಗಳನ್ನು ಈವರೆಗೆ ಗುರುತಿಸಲಾಗಿದೆ.