ಯಲ್ಲಾಪುರ: ನಿವೇಶನ ಕೊಡಿಸುವುದಾಗಿ ನಂಬಿಸಿ 5 ಲಕ್ಷ ರೂ ಹಣ ಪಡೆದು ಭೂಮಿ ಕೊಡಿಸದ ಪ್ರಕರಣಕ್ಕೆ ಸಂಬoಧಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಶಿಕ್ಷಕಿ ರೇವತಿ ವೆಂಕ ನಾಯ್ಕ ಅವರಿಗೆ ಪೊಲೀಸರು ನ್ಯಾಯ ಕೊಡಿಸಿದ್ದಾರೆ. ಅಲ್ಲಿಗೆ ಈ ಪ್ರಕರಣ ಸುಖಾಂತ್ಯ ಕಂಡಿದೆ.
ಹಣ ಪಡೆದಿದ್ದ ಗೋಪಾಲಕೃಷ್ಣ ಭಟ್ಟ ಎಂಬಾತರನ್ನು ಠಾಣೆಗೆ ಕರೆಯಿಸಿದ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದು, ಈ ವೇಳೆ ಶಿಕ್ಷಕಿಗೆ ಹಣ ಮರಳಿಸುವಂತೆ ತಾಕೀತು ಮಾಡಿದರು. `ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ನೀಡಿದಲ್ಲಿ ಹಣ ಮರಳಿಸುವೆ\’ ಎಂದು ಮಧ್ಯವರ್ತಿ ಹೇಳಿಕೆ ನೀಡಿದ್ದು, ಪೊಲೀಸರ ಸಮ್ಮುಖದಲ್ಲಿಯೇ ಹಣ ಹಾಗೂ ಕಾಗದ ಪತ್ರಗಳ ವಿನಿಮಯ ನಡೆಯಿತು. ಹಣ ದೊರೆತ ನಂತರ ಶಿಕ್ಷಕಿ ರೇವತಿ ಸಹ ರಾಜಿಸೂತ್ರಕ್ಕೆ ಒಪ್ಪಿಕೊಂಡರು. ಎದುರುದಾರರು ಸಹ ತಂಟೆ-ತಕರಾರು ಇಲ್ಲದೇ ಅವರಿಂದ ಪಡೆದ ಪೂರ್ತಿ ಹಣ ಪಾವತಿಸಿದರು.
ಈ ಪ್ರಕರಣದ ಬೆನ್ನಲ್ಲೆ ಕೆಲ ಮಧ್ಯವರ್ತಿಗಳ ವಿರುದ್ಧ ಇನ್ನಷ್ಟು ಭೂ ವಂಚನೆಯ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆಗಳಿವೆ. ಯಾರದೋ ಭೂಮಿಯನ್ನು ಇನ್ಯಾರಿಗೋ ತೋರಿಸಿ, ಅದರ ದಾಖಲೆಗಳನ್ನು ಒದಗಿಸದೇ ಹಣ ಪಡೆದ ಪ್ರಕರಣಗಳ ಬಗ್ಗೆಯೂ ಅಲ್ಲಲ್ಲಿ ಆರೋಪಗಳಿವೆ.
ಭೂ ವ್ಯವಹಾರದ ಹೆಸರಿನಲ್ಲಿ ಈಚೆಗೆ ಅನೇಕ ವಂಚನೆ, ಮೋಸ ನಡೆಯುತ್ತಿದ್ದು ಖರೀದಿದಾರರು ಎಚ್ಚರಿಕೆವಹಿಸುವುದು ಸೂಕ್ತ.
ಶಿಕ್ಷಕಿ ರೇವತಿ ಅವರಿಗೆ ಅನ್ಯಾಯವಾದ ಬಗ್ಗೆ `S News ಡಿಜಿಟಲ್\’ ಅಗಸ್ಟ 5ರಂದು ವರದಿ ಪ್ರಕಟಿಸಿತ್ತು. ಆ ವರದಿ ಇಲ್ಲಿ ಓದಿ..
https://sirinews.in/ylpland/