10 ಲಕ್ಷ ರೂ ವ್ಯವಹಾರ ಮಾಡಿದ ಕಾರವಾರದ ಸಿವಿಲ್ ಇಂಜಿನಿಯರ್ ಸಿದ್ಧಾರ್ಥ ನಾಯ್ಕ ಅವರಿಗೆ 1 ಲಕ್ಷ ರೂ ಲಾಭವಾಗಿದ್ದು, 13 ಲಕ್ಷ ರೂ ಜಿಎಸ್ಟಿ ಪಾವತಿಸುವಂತೆ ಸೂಚನೆ ಬಂದಿದೆ. 2017ರ ಲೆಕ್ಕವನ್ನು ಪೂರ್ಣಗೊಳಿಸಲಾಗದೇ ಅವರು ಪರಿತಪಿಸುತ್ತಿದ್ದಾರೆ!
ಸಿದ್ದಾರ್ಥ ನಾಯ್ಕ ಅವರು ಸಿಮೆಂಟ್ ಬ್ಲಾಕ್ ಘಟಕವನ್ನು ಮುನ್ನಡೆಸುತ್ತಿದ್ದಾರೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದ ಕಾರಣ ಅವರು ನಷ್ಟಕ್ಕೆ ಒಳಗಾಗಿದ್ದಾರೆ. ಒಂದೇ ದೇಶ ಒಂದೇ ತೆರಿಗೆ ಎಂದು ವಿಧಿಸಲಾದ ಜಿಎಸ್ಟಿಯ ಅಸ್ಪಷ್ಟ ಹಾಗೂ ಸಂಕೀರ್ಣ ವ್ಯವಸ್ಥೆ ಉದ್ಯಮಿಯನ್ನು ದುರ್ಬಲವನ್ನಾಗಿಸಿದೆ. `ಜಿಎಸ್ಟಿ ಸಂಕೋಲೆಯೊಳಗೆ ಒಮ್ಮೆ ಸಿಕ್ಕಿಬಿದ್ದರೆ ಹೊರಬರುವುದು ಕಷ್ಟ’ ಎಂಬುದು ಸಿದ್ಧಾರ್ಥ ನಾಯ್ಕ ಅವರ ಅನುಭವ.
`ಜಿಎಸ್ಟಿ ಬಗ್ಗೆ ಅಧಿಕಾರಿಗಳಿಗೂ ಸ್ಪಷ್ಟ ಜ್ಞಾನವಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉತ್ತರಿಸುವ ಬದಲು ಬೆದರಿಸುತ್ತಾರೆ. 2017ರಲ್ಲಿ 10 ಲಕ್ಷ ವಹಿವಾಟು ನಡೆದಿದ್ದು, 1 ಲಕ್ಷ ರೂ ಲಾಭ ಬಂದಿರುವ ತನಗೆ 13 ಲಕ್ಷ ಜಿಎಸ್ಟಿ ಪಾವತಿಗೆ ಸೂಚಿಸಲಾಗಿದೆ. ಕೊನೆಗೆ 3.5 ಲಕ್ಷ ರೂಪಾಯಿಯನ್ನು ಬಲವಂತವಾಗಿ ಕಿತ್ತುಕೊಂಡಿದ್ದು, ಎಲ್ಲಾ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಲಾಗಿದೆ’ ಎಂದು ಸಿದ್ಧಾರ್ಥ ನಾಯ್ಕ ಅಳಲು ತೋಡಿಕೊಂಡರು.
`ಕೋವಿಡ್ ಅವಧಿಯಲ್ಲಿ ಸಹ ಪದೇ ಪದೇ ನೋಟಿಸ್ ನೀಡಲಾಗಿದೆ. ವ್ಯಾಪಾರವಿಲ್ಲದಿದ್ದರೂ ಸರ್ಕಾರದಿಂದ ಸಹಾಯ ಸಿಗಲಿಲ್ಲ. 2017ರಿಂದ 2022ರವರೆಗೆ ನಿರಂತರವಾಗಿ ತನಗೆ ನೋಟಿಸ್ ನೀಡಲಾಗಿದ್ದು, ಉದ್ಯಮ ಉಳಿಸಿಕೊಳ್ಳಲು ಜಿಎಸ್ಟಿ ಪಾವತಿ ಅನಿವಾರ್ಯವಾಯಿತು. ಅಂಕೋಲಾದ ಗುತ್ತಿಗೆದಾರ ಬಾಲಚಂದ್ರ ನಾಯ್ಕ ಸಹ ಇದೇ ರೀತಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡರು’ ಎಂದು ಸಿದ್ಧಾರ್ಥ ನಾಯ್ಕ ಪರಿಸ್ಥಿತಿ ವಿವರಿಸಿದರು.
`ಅನೇಕ ಕಡೆ ಚಹಾ ಅಂಗಡಿ ಮಾಲಕರಿಗೂ ಲಕ್ಷಾಂತರ ರೂ ಪಾವತಿಗೆ ನೋಟಿಸ್ ಬಂದಿದೆ. ಅಂಗಡಿ ಮಾರಿದರೂ ಅಷ್ಟು ಹಣ ಸಿಗುವುದಿಲ್ಲ ಎಂದು ಅವರು ಕಣ್ಣೀರಿಡುತ್ತಿದ್ದಾರೆ. ಹೀಗೆ ಮುಂದುವರೆದರೆ ಸಣ್ಣ ವ್ಯಾಪಾರಿಗಳು ಭಾರತ ತೊರೆಯುವ ಸ್ಥಿತಿ ಬರಲಿದ್ದು, ನಗದು ವ್ಯವಹಾರ ಹೆಚ್ಚಾಗಲಿದೆ. ಕಪ್ಪು ಹಣ ಪ್ರಭಲವಾಗಿ ಸರ್ಕಾರದ ಮೇಲಿನ ನಂಬಿಕೆ ಕುಸಿಯಲಿದೆ. ಜೊತೆಗೆ ಭಾರತದ ಆರ್ಥಿಕ ಅಡಿಪಾಯ ಬುಡಮೇಲಾಗುವ ಲಕ್ಷಣವಿದೆ’ ಎಂದು ಸಿದ್ಧಾರ್ಥ ನಾಯ್ಕ ಕಳವಳವ್ಯಕ್ತಪಡಿಸಿದರು.
`ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದವರಿಗೆ ಅನ್ಯಾಯವಾಗಿದೆ. ತೆರಿಗೆ ಪಾವತಿಸದೇ ಇದ್ದವರಿಗೆ ಆ ಮೊತ್ತ ಮನ್ನಾ ಆಗಿದೆ. ಈ ಸಮಸ್ಯೆಗೆ ಪರಿಹಾರ ಸಿಗದೇ ಇದ್ದರೆ ಉದ್ಯಮ ಮಾಡಲು ಯಾರೂ ಮುಂದೆ ಬರುವುದಿಲ್ಲ. ಹೀಗಾಗಿ ಜುಲೈ 23ರಿಂದ 25ರವರೆಗೆ ರಾಜ್ಯಮಟ್ಟದ ವ್ಯಾಪಾರಿಗಳು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಎಲ್ಲರೂ ಸೇರಿ ನ್ಯಾಯಕ್ಕಾಗಿ ಹೋರಾಡುತ್ತೇವೆ’ ಎಂದು ಸಿದ್ಧಾರ್ಥ ನಾಯ್ಕ ತಿಳಿಸಿದರು.
