ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ರಸ್ತೆ ಅತಿಕ್ರಮಣ ನಡೆದ ಬಗ್ಗೆ ಗುತ್ತಿಗೆದಾರ ಸಂಜೀವ ನಾಯ್ಕ ಹೋರಾಟ ನಡೆಸುತ್ತಿದ್ದು, ಅತಿಕ್ರಮಣದಾರರು ಪ್ರಭಾವಿಗಳ ಮೊರೆ ಹೋಗಿದ್ದರಿಂದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಹೀಗಾಗಿ ಭೂ ಅಳತೆಗಾಗಿ ದಿನ ನಿಗದಿಯಾದ ದಿನ ಅರ್ಜಿದಾರ ಸ್ಥಳಕ್ಕೆ ತೆರಳಿದರೂ ಭೂ ಮಾಪನ ಕೆಲಸ ಮಾತ್ರ ನಡೆದಿಲ್ಲ.
ಅಂಕೋಲಾ ಪುರಸಭೆ ವ್ಯಾಪ್ತಿಯ ಶೆಡಗೇರಿ ಗ್ರಾಮದ ಕೋಟೆ ಮಾರುತಿ ದೇವಸ್ತಾನ ಪಕ್ಕದ ಜಾಗ ಅತಿಕ್ರಮಣವಾಗಿದೆ. ಇಲ್ಲಿನ ರಸ್ತೆಯನ್ನು ಕೆಲವರು ಅತಿಕ್ರಮಿಸಿ ಅನಧಿಕೃತ ಶೆಡ್ ನಿರ್ಮಿಸಿದ್ದಾರೆ. ಇದರಿಂದ ಅಲ್ಲಿನ ದೇವಸ್ಥಾನಕ್ಕೆ ಹೋಗುವವರಿಗೆ ವಾಹನ ನಿಲುಗಡೆಯ ಸಮಸ್ಯೆ ಎದುರಾಗಿದೆ. ಈ ಅನಧಿಕೃತ ಶೆಡ್ ತೆರವಿಗೆ ಆಗ್ರಹಿಸಿ ಸಂಜೀವ ನಾಯ್ಕ ಅವರು ಹೋರಾಟ ನಡೆಸುತ್ತಿದ್ದಾರೆ. ಆದರೆ, ಅತಿಕ್ರಮಣದಾರರ ಒತ್ತಡದಿಂದ ಅಧಿಕಾರಿಗಳು ಶೆಡ್ ತೆರವು ಕಾರ್ಯಾಚರಣೆ ನಡೆಸುತ್ತಿಲ್ಲ. ಅತಿಕ್ರಮಣ ಪ್ರದೇಶದ ಸರ್ವೇ ಕಾರ್ಯಕ್ಕೂ ಆಸಕ್ತಿವಹಿಸಿಲ್ಲ.
ದಾಖಲೆಗಳ ಪ್ರಕಾರ ಶೆಡ್ ನಿರ್ಮಾಣವಾದ ಜಾಗ ರಸ್ತೆಗೆ ಸೇರಿದ್ದು. ಆದರೆ, ಅಲ್ಲಿ ಇದೀಗ ರಸ್ತೆ ಇಲ್ಲ. ಸಾರ್ವಜನಿಕ ಹಿತಾಸಕ್ತಿ ಅನ್ವಯ ಅನಧಿಕೃತ ಶೆಡ್ ತೆರವು ಮಾಡಬೇಕು ಎಂಬ ಅರ್ಜಿಗೆ ಅಧಿಕಾರಿಗಳು ಸರ್ವೇಗೆ ಕರೆದಿದ್ದಾರೆ. ಆದರೆ, ನಿಗಧಿತ ದಿನದಂದು ಅರ್ಜಿದಾರರು ಹಾಜರಿದ್ದರೂ ಸರ್ವೇ ಕಾರ್ಯ ಮಾತ್ರ ನಡೆಯುತ್ತಿಲ್ಲ.
2024ರ ಡಿಸೆಂಬರ್ 10ರಂದು ಈ ಜಾಗದ ಗಡಿ ಗುರುತಿಸಲು ಮತ್ತು ಅಳತೆ ಮಾಡಲು ಭೂಮಾಪನ ಇಲಾಖೆಯಿಂದ ನೋಟಿಸ್ ಬಂದಿತ್ತು. ಆದರೆ, ಆ ದಿನ ಭೂ ಮಾಪನ ಕಾರ್ಯ ನಡೆಯಲಿಲ್ಲ. ಬದಲಾಗಿ 2025ರ ಜುಲೈ 4ಕ್ಕೆ ಸರ್ವೇ ಮುಂದೂಡಲಾಯಿತು. ಸರ್ವೇ ಅಧಿಕಾರಿ ವಿರುದ್ಧ ಸಂಜೀವ ನಾಯ್ಕರು ಜಿಲ್ಲಾಧಿಕಾರಿಗೆ ದೂರು ನೀಡಿದ ನಂತರ ಜುಲೈ 21ಕ್ಕೆ ಸರ್ವೇ ಮಾಡುವ ಬಗ್ಗೆ ಮತ್ತೆ ನೋಟಿಸ್ ನೀಡಲಾಯಿತು. ಆದರೆ, ಆ ದಿನ ಸಹ ಸರ್ವೇ ನಡೆಸಲು ಅಧಿಕಾರಿಗಳು ಆಸಕ್ತರಾಗಿರಲಿಲ್ಲ.
ಅಂಕೋಲಾ ಪುರಸಭೆ ಮುಖ್ಯಾಧಿಕಾರಿ, ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಹ ಈ ನೋಟಿಸ್ ರವಾನೆಯಾಗಿತ್ತು. ಗಲಾಟೆ ನಡೆಯದಂತೆ ಮುನ್ನಚ್ಚರಿಕೆವಹಿಸುವ ಬಗ್ಗೆ ಸಂಜೀವ ನಾಯ್ಕ ಅವರು ತಹಶೀಲ್ದಾರರಿಗೂ ಪತ್ರ ಬರೆದಿದ್ದರು. ತಹಶೀಲ್ದಾರರಿಂದ ಪೊಲೀಸರಿಗೂ ಪತ್ರ ರವಾನೆಯಾಗಿದ್ದು, ಪೊಲೀಸರು ಆ ದಿನ ಜಾಗದಲ್ಲಿ ಕಾಣಲಿಲ್ಲ.
ಜುಲೈ 21ರಂದು ಜಾಗದಲ್ಲಿ ಪುರಸಭೆ ಅಧ್ಯಕ್ಷ, ಕಂದಾಯ ಅಧಿಕಾರಿ, ಅರ್ಜಿದಾರರ ಜೊತೆ ಸ್ಥಳೀಯರು ಹಾಜರಿದ್ದರೂ ಸರ್ವೇ ಕಾರ್ಯ ಮಾತ್ರ ನಡೆಯಲಿಲ್ಲ. ಭೂ ಅಳತೆಗೆ ಬಂದಿದ್ದ ಸರ್ವೇಯರ್ ಪ್ರಶಾಂತ ಶೇಟ್ `ಈ ಜಾಗಕ್ಕೆ ನಕ್ಷೆಯೇ ಇಲ್ಲ. ಆಕಾರ್ ಬಂದ್ ದಾಖಲೆಯೂ ಸಿಕ್ಕಿಲ್ಲ’ ಎಂದು ಹೇಳಿದರು. ಇದರಿಂದ ಆಕ್ರೋಶಗೊಂಡ ಅರ್ಜಿದಾರ ಸಂಜೀವ ನಾಯ್ಕ ಅಸಮಧಾನವ್ಯಕ್ತಪಡಿಸಿದರು.
`ಕೆಲ ಪ್ರಭಾವಿಗಳು ಸೇರಿ ಭೂಮಿ ಕಬಳಿಸುವ ಪ್ರಯತ್ನ ಮಾಡಿದ್ದಾರೆ. ಸರ್ವೇ ಆಗಲ್ಲ ಎಂದಾದರೆ ಮೊದಲೇ ತಿಳಿಸಬೇಕಿತ್ತು. ಎಲ್ಲರನ್ನು ಕರೆಯಿಸಿ ನಂತರ ಈ ರೀತಿ ಹೇಳುವುದು ಸರಿಯಲ್ಲ’ ಎಂದು ಅಲ್ಲಿದ್ದವರು ಮಾತನಾಡಿಕೊಂಡರು.
