ರಾಜ್ಯದ ಪ್ರಸಿದ್ಧ ಜಾತ್ರಾ ಉತ್ಸವಗಳಲ್ಲಿ ಭಟ್ಕಳದ ಗ್ರಾಮದೇವಿ ಮಾರಿಕಾಂಬಾ ಜಾತ್ರೆಯೂ ಒಂದು. ಜುಲೈ 23 ಹಾಗೂ 24ರಂದು ಈ ಜಾತ್ರೆ ನಡೆಯಲಿದ್ದು, ಜಾತ್ರಾ ದೇವಿಯ ದರ್ಶನಕ್ಕಾಗಿ ಜನ ಕಾಯುತ್ತಿದ್ದಾರೆ.
ಗ್ರಾಮಕ್ಕೆ ಯಾವುದೇ ರೀತಿಯ ಕಷ್ಟ, ತೊಂದರೆ ಬಾರದಂತೆ ಜನ ಮಾರಮ್ಮನ ಮೊರೆ ಹೋಗುತ್ತಾರೆ. ಕೈ ಮುಗಿದು ಪ್ರಾರ್ಥಿಸಿದವರನ್ನು ಮಾರಮ್ಮ ಎಂದಿಗೂ ಕೈ ಬಿಡುವುದಿಲ್ಲ ಎಂಬುದು ಭಕ್ತರ ನಂಬಿಕೆ. ಸದ್ಯ ಮಾರಮ್ಮ ಜಾತ್ರೆ ಅಂಗವಾಗಿ ಮಾರಿದೇವಿಯ ಮೂರ್ತಿ ತಯಾರಿ ಭರದಿಂದ ಸಾಗಿದ್ದು, ಇಡೀ ಊರು ಹಬ್ಬದ ವಾತಾವರಣದಲ್ಲಿದೆ.
ಪ್ರಸಿದ್ಧ ಮಾರಿ ಜಾತ್ರೆಗೆ ಕ್ಷಣಗಣನೆ ಶುರುವಾಗಿದ್ದರಿಂದ ಊರಿಗೆ ಊರೇ ಸಿಂಗಾರಗೊoಡಿದೆ. ತಾಯಿ ಮಾರಿಕಾಂಬೆಯ ಭವ್ಯ ಜಾತ್ರೆ ಕಣ್ತುಂಬಿಕೊಳ್ಳಲು ಜನ ಭಕ್ತಿಯಿಂದ ಕಾಯುತ್ತಿದ್ದಾರೆ. ವಿಶ್ವಕರ್ಮ ಸಮಾಜದ ಮಾರುತಿ ಆಚಾರಿ ಅವರ ಮನೆ ದೇವಿಯ ತವರು. ಹೀಗಾಗಿ ಅಲ್ಲಿ ಮೂರ್ತಿ ಸಿದ್ಧವಾಗುತ್ತಿದೆ. ಈಗಾಗಲೇ ದೇವಿಯ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು, ಮಂಗಳವಾರ ಮೂರ್ತಿಗೆ ಬಣ್ಣ ಬಡಿದು ಪೂಜೆ ಮಾಡಲಾಗಿದೆ. ಮುಂದೆ ಮಾರಿಕಾಂಬಾ ದೇವಸ್ಥಾನಕ್ಕೆ ದೇವಿಯ ಮೂರ್ತಿಯನ್ನು ಕೊಂಡೊಯ್ಯುವ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.
ಸಂಪ್ರದಾಯದoತೆ ಕಳೆದ ವಾರ ಮುಟ್ಟಳ್ಳಿಯ ರೈಲ್ವೆ ನಿಲ್ದಾಣದ ಸಮೀಪ ಮೂರ್ತಿ ತಯಾರಿಕೆಗೆ ಬೇಕಾದ ಮರ ಆಯ್ಕೆ ಮಾಡಲಾಗಿದೆ. ಅದಕ್ಕೆ ಪೂಜೆ ಸಲ್ಲಿಸಿದ ಒಂದೇ ವಾರದಲ್ಲಿ ಮೂರ್ತಿ ಸಿದ್ಧಗೊಂಡಿದೆ. ಮುತೈದೆಯರು ಮೂರ್ತಿಗೆ ಉಡಿತುಂಬಿ ಸಂಪ್ರದಾಯ ಮಾಡಿದ ನಂತರ ಮೂರ್ತಿ ಕೆತ್ತನೆ ಕೆಲಸ ಶುರುವಾಗಿದ್ದು, ತಲತಲಾಂತರದ ಪದ್ಧತಿಯಂತೆ ವಿಶ್ವಕರ್ಮ ಸಮಾಜದ ಕುಟುಂಬದವರು ಮೂರ್ತಿ ಕೆತ್ತನೆಯ ಸೇವೆ ಮಾಡಿದ್ದಾರೆ.
ಚನ್ನಪಟ್ಟಣ ಹನುಮಂತದೇವರ ರಥೋತ್ಸವಹೊರತುಪಡಿಸಿ ಆಷಾಢದಲ್ಲಿ ಜರುಗುವ ಜಾತ್ರೆಗಳಲ್ಲಿ ಭಟ್ಕಳ ಮಾರಿ ಜಾತ್ರೆ ದೊಡ್ಡದು. ಹೀಗಾಗಿ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನಪಡೆಯುತ್ತಾರೆ.
