ಶಿರಸಿ ಮಾರಿಕಾಂಬಾ ದೇವಿ ಪ್ರಸಾದ ನೀಡಿದ ಕಾರಣ ಕಾಣೆಯಾದ ಮಗನ ಬಗ್ಗೆ ದೂರು ನೀಡದೇ ಮೌನವಾಗಿದ್ದ ಸಿದ್ದಾಪುರದ ರಾಧಾ ಗೌಡ ಅವರು ಎರಡು ತಿಂಗಳ ನಂತರ ಪೊಲೀಸರ ಮೊರೆ ಹೋಗಿದ್ದಾರೆ. `ಬೆಂಗಳೂರಿಗೆ ಹೊರಟ ತನ್ನ ಮಗ ಇನ್ನೂ ಮನೆಗೆ ಬಂದಿಲ್ಲ’ ಎಂದು ಅವರು ಪೊಲೀಸರ ಬಳಿ ಅಳಲು ತೋಡಿಕೊಂಡಿದ್ದಾರೆ.
ಸಿದ್ದಾಪುರದ ಅರೆಹಳ್ಳ ಬಳಿಯ ದೇವಿಸರದಲ್ಲಿ ಧನಂಜಯ ಗೌಡ ವಾಸವಾಗಿದ್ದರು. ಹೊಟೇಲ್ ಕೆಲಸ ಮಾಡಿಕೊಂಡಿದ್ದ ಅವರು ಮೇ 11ರಂದು ಬೆಂಗಳೂರಿಗೆ ಹೊರಟಿದ್ದರು. ಅಲ್ಲಿನ ಹೊಟೇಲಿನಲ್ಲಿ ದುಡಿಯುವುದಾಗಿ ಮನೆಯಲ್ಲಿ ಹೇಳಿದ್ದರು. ಆದರೆ, ಮನೆಯಿಂದ ಹೊರಟ ಅವರು ಫೋನು ಮಾಡಿಲ್ಲ. ಮೆಸೆಜಿಗೂ ಉತ್ತರಿಸಿಲ್ಲ. ಅವರಿಗೆ ಫೋನ್ ಮಾಡಿದಾಗ `ಅಸ್ತಿತ್ವದಲ್ಲಿ ಇಲ್ಲ’ ಎಂಬ ಉತ್ತರ ಬರುತ್ತಿತ್ತು.
ಧನಂಜಯ ಗೌಡ ಅವರ ಸ್ನೇಹಿತರಾದ ರಾಮು, ಮಹೇಶ, ರಾಘು ಅವರ ಬಳಿ ರಾಧಾ ಗೌಡ ಅವರು ಮಗನ ಬಗ್ಗೆ ವಿಚಾರಿಸಿದ್ದರು. ಅವರಿಗೂ ಸಹ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ರಾಧಾ ಗೌಡ ಅವರು ದೇವರ ಮೊರೆ ಹೋದರು. ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರಸಾದ ನೋಡಿದಾಗ `ಮಗ ತೊಂದರೆಯಲ್ಲಿದ್ದಾನೆ. ಮನೆಗೆ ಬರುತ್ತಾನೆ’ ಎಂಬ ಉತ್ತರ ಸಿಕ್ಕಿತು. ಹೀಗಾಗಿ ಅವರು ಕೊಂಚ ಸಮಾಧಾನದಿಂದಲೇ ಹುಡುಕಾಟ ಮುಂದುವರೆಸಿದರು.
ಧನoಜಯ ಗೌಡ ಅವರು ಓಡಾಡುವ ಕಂಬಳಿಸರ, ಗುಳೇಜಡ್ಡಿ, ಅತ್ತಿಮರಡು ಕಡೆ ರಾಧಾ ಗೌಡ ಅವರು ಹೋಗಿ ಬಂದರು. ಆದರೆ, ಎಲ್ಲಿ ಹುಡುಕಿದರೂ ಆತ ಸಿಗಲಿಲ್ಲ. ಕೊನೆಗೆ ಪೊಲೀಸ್ ಠಾಣೆಗೆ ಬಂದ ಅವರು `ದೇವರ ಮೇಲೆ ನಂಬಿಕೆಯಿಟ್ಟು ದೂರು ನೀಡಿರಲಿಲ್ಲ. ಇದೀಗ ದೂರು ಸ್ವೀಕರಿಸಿ’ ಎಂದು ಅಂಗಲಾಚಿದರು. `ದೇವರ ಮೇಲೆ ನಂಬಿಕೆ ಜೊತೆ ಪೊಲೀಸರ ಮೇಲೆಯೂ ಭರವಸೆಯಿಡಿ’ ಎಂದು ಸಿದ್ದಾಪುರ ಪೊಲೀಸರು ಬುದ್ದಿಮಾತು ಹೇಳಿ ಪ್ರಕರಣ ದಾಖಲಿಸಿಕೊಂಡರು.
ಜುಲೈ 21ರಂದು ಸಿದ್ದಾಪುರ ಠಾಣೆಗೆ ಬಂದಿದ್ದ ರಾಧಾ ಅವರು ಮಗನ ಬರುವಿಕೆಗಾಗಿ ಕಾದು ಕಾದು ಸುಸ್ತಾಗಿದ್ದರು. ಪೊಲೀಸರು ಅವರನ್ನು ಸಮಾಧಾನ ಮಾಡಿ ಮನೆಗೆ ಕಳುಹಿಸಿದರು.
