ಭಟ್ಕಳ ಹೊನ್ನಾವರಕ್ಕೆ ಹೋಗುತ್ತಿದ್ದ ಬುಲೆಟ್ ಬೈಕಿನಿಂದ ಹಾರಿದ ಯುವತಿ ರಕ್ತದ ಮಡವಿನಲ್ಲಿ ಬಿದ್ದು ಸಾವನಪ್ಪಿದ್ದು, ಆಕೆಯ ಶವವನ್ನು ಊರಿಗೆ ರವಾನಿಸಲಾಗಿದೆ.
ಹಾವೇರಿ ಬ್ಯಾಡಗಿಯ ಆಕಾಶ ಓಲೆಕಾರ್ ಅವರು ಜುಲೈ 21ರಂದು ಬುಲೆಟ್ ಬೈಕಿನಲ್ಲಿ ಸೊರಬದ ಐಶ್ವರ್ಯ ಪಾಲಾಪಕ್ಷ ಅವರನ್ನು ಕೂರಿಸಿಕೊಂಡು ಹೊರಟಿದ್ದರು. ಇನ್ನೂ ನೋಂದಣಿ ಸಂಖ್ಯೆಯನ್ನು ಹೊಂದಿರದ ಬುಲೆಟ್ ಬೈಕನ್ನು ಅವರು ವೇಗವಾಗಿ ಓಡಿಸುತ್ತಿದ್ದರು. ಮಂಕಿಯ ಮಾವಿನಕಟ್ಟಾದ ಅಮ್ಮಾ ಲಾಡ್ಜಿನ ಬಳಿ ಬೈಕು ನಿಯಂತ್ರಣ ತಪ್ಪಿದ್ದು, ಆ ವೇಳೆ ಐಶ್ವರ್ಯ ಪಾಲಾಪಕ್ಷ ಅವರು ಬೈಕಿನಿಂದ ಕೆಳಗೆ ಹಾರಿದರು. ಪರಿಣಾಮ ಅವರು ಅಲ್ಲಿಯೇ ಸಾವನಪ್ಪಿದರು.
ಮುಂದೆ ಆ ಬೈಕು ಸುರಕ್ಷತಾ ತಡೆಗೋಡೆಗೆ ಡಿಕ್ಕಿ ಹೊಡೆಯಿತು. ಇದರಿಂದ ಆಕಾಶ ಓಲೆಕಾರ್ ಸಹ ಗಾಯಗೊಂಡರು. ಆಕಾಶ ಓಲೆಕಾರ್ ಕೈ-ಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದರು. ಈ ಅಪಘಾತ ನೋಡಿದ ಮಂಕಿ ಖಾಜಿಮನೆಯ ವ್ಯಾಪಾರಿ ಉಲ್ಲಾಸ ನಾಯ್ಕ ಪೊಲೀಸರಿಗೆ ಮಾಹಿತಿ ನೀಡಿದರು.
