ಭಟ್ಕಳದ ರೋಹಿದಾಸ ಕಾಮತ್ ಹಾಗೂ ಮಹಮದ್ ಸುಕ್ರಿ ನಡುವೆ ಭೂಮಿ ವಿಷಯವಾಗಿ ಹೊಡೆದಾಟ ನಡೆದಿದೆ. ಈ ಎರಡು ಕಡೆಯವರು ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಭಟ್ಕಳದ ಹೆಬಳೆ ಬಳಿಯ ಕುಕಿನೀರ್’ನ ರೋಹಿದಾಸ ಕಾಮತ್ ಅವರು ದೂರಿದ ಪ್ರಕಾರ ಅವರು ಜುಲೈ 21ರಂದು ಕಪೌಂಡ್ ನಿರ್ಮಿಸುತ್ತಿದ್ದರು. ಭೂ ಮಾಪಕರು ಗಡಿ ಗುರುತು ಹಾಕಿ ಕಲ್ಲು ಹುಗಿದ ಪ್ರಕಾರವೇ ಅವರು ಕಪೌಂಡ್ ನಿರ್ಮಾಣ ಮಾಡುತ್ತಿದ್ದರು. ಆಗ, ಅಲ್ಲಿಗೆ ಬಂದ ಮಹಮದ್ ಸುಕ್ರಿ ಭೂ ಮಾಪಕರು ಸೂಚಿಸಿದ ಕಡೆ ಹುಗಿದಿದ್ದ ಕಲ್ಲುಗಳನ್ನು ಕಿತ್ತರು. ಗುಂಡಾ ಹಾಗೂ ಮಹಿಳೆಯರನ್ನು ಕರೆತಂದು ರೋಹಿದಾಸ ಕಾಮತ್ ಅವರಿಗೆ ಬೆದರಿಕೆ ಒಡ್ಡಿದರು.
ಇದೇ ಪ್ರಕರಣವಾಗಿ ಹೆಬಳೆ ಗಾಂಧೀನಗರದ ಜಮಿಯಾಬಾದ್ ಬಳಿಯ ಮಹಮದ್ ಸುಕ್ರಿ ದೂರಿರುವ ಪ್ರಕಾರ, ಆ ದಿನ ಮಹಮದ್ ಸುಕ್ರಿ ಸಹ ಕಪೌಂಡ್ ನಿರ್ಮಿಸುತ್ತಿದ್ದರು. ಅವರು ಭೂ ಮಾಪಕರು ಹುಗಿದ ಕಲ್ಲಿನ ಆಧಾರದಲ್ಲಿ ಕಪೌಂಡ್ ನಿರ್ಮಿಸುತ್ತಿದ್ದು, ಅದಕ್ಕೆ ರೋಹಿದಾಸ ಕಾಮತ್ ಜೊತೆ ವಿನಾಯಕ ಕಾಮತ್ ಹಾಗೂ ವೆಂಕಟೇಶ ಕಾಮತ್ ಅಡ್ಡಿಪಡಿಸಿದರು. ಆ ಕಲ್ಲುಗಳನ್ನು ಕಿತ್ತು ಮಹಿಳೆಯರನ್ನು ಸ್ಥಳಕ್ಕೆ ಕರೆಯಿಸಿ ಬೆದರಿಸಿದರು.
ಈ ಎರಡೂ ದೂರುಗಳು ಒಂದೇ ರೀತಿಯಲ್ಲಿರುವುದರಿಂದ ಪೊಲೀಸರು ಇಬ್ಬರನ್ನು ನ್ಯಾಯಾಲಕ್ಕೆ ಕಳುಹಿಸಿದರು. ನ್ಯಾಯಾಲಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದು, ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಎರಡು ಕಡೆಯವರ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
