ಕುಮಟಾದ ತದಡಿಯಲ್ಲಿರುವ ಮೀನುಗಾರಿಕಾ ಇಲಾಖೆ ಕಟ್ಟಡ ಶಿಥಿಲಗೊಂಡಿದ್ದು, ಗಾಳಿ-ಮಳೆಗೆ ಉದುರಿ ಬೀಳುವ ಸ್ಥಿತಿಯಲ್ಲಿದೆ. ಜೋರು ಗಾಳಿ ಬಂದಾಗ ಕಟ್ಟಡದ ಮೇಲ್ಬಾಗ ಅಲ್ಲಾಡುತ್ತದೆ. ಕೆಲವೊಮ್ಮೆ ಕಚೇರಿ ಒಳಗೆ ನೀರು ಸೋರುತ್ತದೆ. ಕಟ್ಟಡ ಮರು ನಿರ್ಮಾಣಕ್ಕೆ ಪದೇ ಪದೇ ಪತ್ರ ರವಾನೆಯಾಗುತ್ತಿದ್ದರೂ ಇದಕ್ಕೆ ಯಾರೊಬ್ಬರೂ ಸ್ಪಂದಿಸಿಲ್ಲ!
ಸರ್ಕಾರಿ ಕಟ್ಟಡದ ಗುಣಮಟ್ಟದ ಬಗ್ಗೆ ಆಗಾಗ ಸರ್ಕಾರ ವರದಿ ಪಡೆಯುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಟ್ಟಡ ಪರಿಶೀಲಿಸಿ ವರದಿ ಸಲ್ಲಿಸುತ್ತಾರೆ. ಆದರೆ, ಸರ್ಕಾರಿ ಅಧೀನದಲ್ಲಿರುವ ತದಡಿ ಬಂದರಿನ ಸರ್ಕಾರಿ ಅಧಿಕಾರಿಗಳ ಕಚೇರಿ ಶಿಥಿಲಾವ್ಯವಸ್ಥೆಯಲ್ಲಿದ್ದರೂ ಅದು ಸರ್ಕಾರದ ಗಮನಕ್ಕೆ ಬಂದಿಲ್ಲ. ಅಲ್ಲಿನ ಅಧಿಕಾರಿಗಳೇ ಕಟ್ಟಡ ಶಿಥಿಲವಾಗಿರುವ ಬಗ್ಗೆ ಪತ್ರ ಬರೆದಿದ್ದರೂ ಪರಿಶೀಲನೆಯ ಕೆಲಸ ನಡೆದಿಲ್ಲ. ಕಟ್ಟಡ ಮರು ನಿರ್ಮಾಣದ ಬಗ್ಗೆ ಈವರೆಗೆ ಯಾರೂ ಮಾತನಾಡಿಲ್ಲ!.
1982ರಲ್ಲಿ ತದಡಿ ಬಂದರಿನಲ್ಲಿ ಮೂರು ಹಂತದ ಕಟ್ಟಡ ನಿರ್ಮಿಸಲಾಗಿದ್ದು, ಆ ಕಟ್ಟಡದಲ್ಲಿಯೇ ಇದೀಗ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕರ ಕಚೇರಿ ನಡೆಯುತ್ತಿದೆ. ಉಪನಿರ್ದೇಶಕರ ಕಚೇರಿಯಲ್ಲಿ ಒಟ್ಟು 5 ಸಿಬ್ಬಂದಿ ಇದ್ದಾರೆ. ಇದೇ ಕಟ್ಟಡದ ಇನ್ನೊಂದು ಬದಿ ರಾಜ್ಯ ಸರ್ಕಾರದ ಉದ್ದಿಮೆಯ ಒಂದು ಭಾಗವಾದ ಮೀನುಗಾರಿಕೆ ಅಭಿವೃದ್ಧಿ ನಿಗಮದ ಕಚೇರಿಯೂ ಇದೆ. ಆ ಕಚೇರಿಯಲ್ಲಿ ಸಹ 8 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಕಚೇರಿ ಅವಧಿಯಲ್ಲಿ ಈ ಕಟ್ಟಡ ಕುಸಿದು ಅನಾಹುತ ನಡೆದರೆ ಈ 13 ಸರ್ಕಾರಿ ನೌಕರರ ಪ್ರಾಣಕ್ಕೆ ಅಪಾಯವಿದೆ.
ಇನ್ನೂ ಈ ಜಾಗವೂ ಮೀನುಗಾರಿಕಾ ಇಲಾಖೆಗೆ ಸೇರಿದ್ದು. ಕಟ್ಟಡ ಸಹ ಮೀನುಗಾರಿಕಾ ಇಲಾಖೆಗೆ ಸೇರಿದ್ದು. ಆದರೆ, ಬಂದರು ಬಳಿ ಕಚೇರಿ ನಡೆಸಲು ಇಲಾಖೆ ಬಳಿ ಬೇರೆ ಕಟ್ಟಡವಿಲ್ಲ. ಹೀಗಾಗಿಯೇ ಶಿಥಿಲಗೊಂಡ ಕಟ್ಟಡದಲ್ಲಿಯೇ ಕಂಪ್ಯುಟರ್ ಸೇರಿ ವಿವಿಧ ಉಪಕರಣಗಳನ್ನು ಇಡಲಾಗಿದೆ. ಸಿಬ್ಬಂದಿಯೂ ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡುತ್ತಿದ್ದು, ನಿತ್ಯ ನೂರಾರು ಜನ ವಿವಿಧ ಕೆಲಸಗಳಿಗಾಗಿ ಆ ಕಚೇರಿಗೆ ಭೇಟಿ ನೀಡುತ್ತಿದ್ದಾರೆ. ಅವರೆಲ್ಲರೂ ಭೂತ ಬಂಗಲೆ ನೋಡಿ ಬೆದರುತ್ತಿದ್ದಾರೆ.

`ಅಪಾಯ ಆಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಸರ್ಕಾರ ತಮ್ಮ ಸಿಬ್ಬಂದಿ ಜೊತೆ ಸಾರ್ವಜನಿಕರಿಗೆ ಸಹ ರಕ್ಷಣೆ ನೀಡಬೇಕು. ಈ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು’ ಎಂದು ಕರವೇ ಜನಧ್ವನಿ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷ ಉಮಾಕಾಂತ್ ಹೊಸಕಟ್ಟಾ ಒತ್ತಾಯಿಸಿದ್ದಾರೆ. `ಮೊದಲಿನಿಂದಲೂ ಸರ್ಕಾರ ತದಡಿ ಬಂದರು ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ. ಅದರ ಪರಿಣಾಮವಾಗಿ ಉಪನಿರ್ದೇಶಕರ ಕಚೇರಿಯ ಜೊತೆ ಪಕ್ಕದಲ್ಲಿರುವ ವಾಕ್ಸನ್ ಹಾಲ್ ಹಾಗೂ ಮಹಿಳಾ ಸಮುದಾಯ ಭವನ ಸಹ ಅಪಾಯದಲ್ಲಿದೆ’ ಎಂದವರು ವಿವರಿಸಿದರು.
`ಕಟ್ಟಡ ಅಪಾಯಕಾರಿಯಲ್ಲಿರುವುದು ಸತ್ಯ. ಈಗಾಗಲೇ ಕಟ್ಟಡ ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನದ ನಿರೀಕ್ಷೆಯಲ್ಲಿದ್ದೇವೆ’ ಎಂದು ಅದೇ ಕಚೇರಿಯಲ್ಲಿ ಕೆಲಸ ಮಾಡುವ ಮೀನುಗಾರಿಕಾ ಇಲಾಖೆ ಉಪನಿರ್ದೇಶಕ ರವೀಂದ್ರ ತಳ್ಳೇಕರ್ ಮಾಹಿತಿ ನೀಡಿದರು.
