ವರ್ಷದಿಂದ ವರ್ಷಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗುತ್ತಿದೆ. ಪರಿಣಾಮ ಮಳೆ ಅನಾಹುತಗಳ ಸಂಖ್ಯೆಯೂ ಅಧಿಕವಾಗಿದೆ. ನಿತ್ಯ ಹತ್ತಾರು ಮನೆ ಕುಸಿತದ ವರದಿ ಸರ್ಕಾರದ ಕಡತ ಸೇರುತ್ತಿದೆ. ಆದರೆ, ಮಳೆಯಿಂದ ಮನೆ ಕಳೆದುಕೊಳ್ಳುವವರಿಗೆ ಸರ್ಕಾರದಿಂದ ಪೂರ್ಣ ಪ್ರಮಾಣದ ಪರಿಹಾರ ಮಾತ್ರ ಸಿಗುತ್ತಿಲ್ಲ. ಕಾರಣ ಮನೆಯಿದ್ದ ಭೂಮಿ ಅತಿಕ್ರಮಣ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣ ಹಾಗೂ ಸೊಪ್ಪಿನ ಬೆಟ್ಟದಲ್ಲಿ ಮನೆ ನಿರ್ಮಿಸಿಕೊಂಡವರೇ ಅಧಿಕವಿದ್ದಾರೆ. ಶೇ 50ಕ್ಕೂ ಅಧಿಕ ಮನೆಗಳು ಅಕ್ರಮ ಪಟ್ಟಿಯಲ್ಲಿವೆ. ಹಲವು ಮನೆಗಳು ಅಪಾಯದ ಅಂಚಿನಲ್ಲಿದ್ದು, ಮಳೆಗಾಲದ ಅವಧಿಯಲ್ಲಿ ಮನೆ ಖಾಲಿ ಮಾಡುವಂತೆ ನೋಟಿಸ್ ಸಹ ನೀಡಲಾಗಿದೆ. ಜೊತೆಗೆ ಅನಾಧಿಕಾಲದ ಮನೆಗಳು ಇದೀಗ ಕುಸಿತ ಕಾಣುತ್ತಿದ್ದು, ಜನ ಆಸರೆಗಾಗಿ ಅಂಗಲಾಚುತ್ತಿದ್ದಾರೆ. ಮೊದಲು ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದರೆ 5 ಲಕ್ಷ ರೂ ಪರಿಹಾರ ಸಿಗುತ್ತಿತ್ತು. ಆದರೆ, ಇದೀಗ ಪೂರ್ಣ ಮನೆ ಬಿದ್ದರೂ ಸರ್ಕಾರದಿಂದ 1.20 ಲಕ್ಷ ರೂ ಮಾತ್ರ ಸಿಗುತ್ತಿದೆ. ಅತಿಕ್ರಮಣ ಪ್ರದೇಶದಲ್ಲಿನ ಮನೆ ಬಿದ್ದರೆ ಸರ್ಕಾರದಿಂದ ಸಿಗುವ ಸಾಂತ್ವಾನ ಮೂರು ಕಾಸಿಗೂ ಪ್ರಯೋಜನಕ್ಕಿಲ್ಲ.
ಭೂಮಿ ಇಲ್ಲದೇ ಕೂಲಿ ಮಾಡುವ ಜನ ಅನಿವಾರ್ಯವಾಗಿ ಅತಿಕ್ರಮಣ ಪ್ರದೇಶದಲ್ಲಿ ವಾಸವಾಗಿದ್ದು, ಅನೇಕ ಮನೆಗಳಿಗೆ ತೆರಳಲು ಈಗಲೂ ರಸ್ತೆಯಿಲ್ಲ. ಧರೆ ಅಂಚಿನ ಮನೆಗಳ ಪರಿಸ್ಥಿತಿಯಂತೂ ಶೋಚನೀಯ. ಧರೆ ಬಿದ್ದರೆ ಅಲ್ಲಿನವರಿಗೆ ಬದುಕು ಕಟ್ಟಿಕೊಳ್ಳಲು ಬೇರೆ ಜಾಗವೂ ಸಿಗುತ್ತಿಲ್ಲ. ಹೊಸ ಅತಿಕ್ರಮಣಕ್ಕೂ ಇದೀಗ ಅವಕಾಶವಿಲ್ಲ. ಮನೆ ಮರು ನಿರ್ಮಾಣಕ್ಕೆ 1.20 ಲಕ್ಷ ಸಾಲುತ್ತಿಲ್ಲ ಎಂಬುದು ಒಂದು ನೋವಾದರೆ ಹೊಸ ಮನೆ ನಿರ್ಮಾಣಕ್ಕೆ ಅತಿಕ್ರಮಣದಾರರಿಗೆ ಜಾಗ ಸಿಗುತ್ತಿಲ್ಲ ಎಂಬುದು ಇನ್ನೊಂದು ಕೊರಗು. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಈ ನಿಯಮಾವಳಿ ಸಡಿಲಗೊಳಿಸಬೇಕು ಎಂಬ ಒತ್ತಾಯ ಸಹ ಇಂದು ನಿನ್ನೆಯದಲ್ಲ. ಆದರೆ, ಆ ಸಡಲಿಕೆಗೆ ಈವರೆಗೂ ಸಮಯ ಕೂಡಿಬಂದಿಲ್ಲ.
