ಮುರುಡೇಶ್ವರದ ಶ್ರೀನಿವಾಸ ಹೊಟೇಲ್’ಗೆ ನುಗ್ಗಿದ ಕಿರಣ ನಾಯ್ಕ ಎಂಬಾತರು ಹೊಟೇಲ್ ಮಾಲಕ ಅನಂತ ನಾಯ್ಕ ಅವರಿಗೆ ಥಳಿಸಿ ಕ್ಯಾಶ್ ಕೌಂಟರಿನಲ್ಲಿದ್ದ ಹಣ ಅಪಹರಿಸಿದ್ದಾರೆ. ಅದಾದ ನಂತರ ಅನಂತ ನಾಯ್ಕ ಅವರು ಪೊಲೀಸ್ ದೂರು ನೀಡಲು ಠಾಣೆಗೆ ತೆರಳಿದ್ದು, ಅಲ್ಲಿಯೂ ಆಗಮಿಸಿದ ಕಿರಣ ನಾಯ್ಕ ದೂರು ಸ್ವೀಕರಿಸಲು ಮುಂದಾದ ಪೊಲೀಸ್ ಸಿಬ್ಬಂದಿಯನ್ನು ಹಿಡಿದು ಥಳಿಸಿದ್ದಾರೆ.
ಭಟ್ಕಳ ತಾಲೂಕಿನ ಮುರುಡೇಶ್ವರ ಬಳಿಯ ಮಾವಳ್ಳಿ-2 ಕನ್ನಡ ಶಾಲೆ ಬಳಿ ವಾಸಿಸುವ ಅನಂತ ನಾಯ್ಕ ಅವರು ಮುರುಡೇಶ್ವರದ ಕಲ್ಯಾಣಿ ಬಳಿ ಶ್ರೀನಿವಾಸ ಹೋಟೆಲ್ ನಡೆಸುತ್ತಾರೆ. ಜುಲೈ 26ರಂದು ಅವರು ಹೊಟೇಲ್ ಸಿಬ್ಬಂದಿ ಅನಿಲ ಪ್ರಭು, ಮೋಹನ ನಾಯ್ಕ ಹಾಗೂ ಉಮಾ ನಾಯ್ಕ ಜೊತೆ ಹೊಟೇಲ್ ಕೆಲಸದಲ್ಲಿ ನಿರತರಾಗಿದ್ದರು. ಆಗ ಹೊಟೇಲಿಗೆ ನುಗ್ಗಿದ ಅದೇ ಊರಿನ ಫಕ್ರಿಮನೆ ಕಿರಣ ನಾಯ್ಕ ಅಲ್ಲಿ ದಾಂಧಲೆ ಶುರು ಮಾಡಿದರು.
ಆಕ್ರೋಶದಲ್ಲಿದ್ದ ಕಿರಣ ನಾಯ್ಕ ಹೊಟೇಲಿನ ಟೇಬಲುಗಳನ್ನು ತಲೆಕೆಳಗಾಗಿಸಿ ಅವುಗಳನ್ನು ಜಖಂ ಮಾಡಿದರು. ಹೊಟೇಲ್ ಮಾಲಕ ಅನಂತ ನಾಯ್ಕ ಅವರನ್ನು ಬೈದರು. ನಂತರ ಅನಂತ ನಾಯ್ಕ ಅವರನ್ನು ಹಿಡಿದು ಥಳಿಸಿದ್ದು, ಕ್ಯಾಶ್ ಕೌಂಟರಿನಲ್ಲಿದ್ದ 1500ರೂ ಹಣವನ್ನು ಅಪಹರಿಸಿದರು. ನೋವುಂಡ ಅನಂತ ನಾಯ್ಕ ಮುರುಡೇಶ್ವರ ಪೊಲೀಸ್ ಠಾಣೆಗೆ ಬಂದರೂ ಕಿರಣ ನಾಯ್ಕ ಅವರನ್ನು ಬಿಡದೇ ಬೆನ್ನಟ್ಟಿ ಬಂದರು.
ದಾವoತದಲ್ಲಿ ಪೊಲೀಸ್ ಠಾಣೆಗೆ ಬಂದ ಅನಂತ ನಾಯ್ಕ ಅವರನ್ನು ಸಹಾಯಕ ಪೊಲೀಸ್ ನಿರೀಕ್ಷಕ ಉಲ್ಲಾಸ ಕಲ್ಸಿ ಸಮಾಧಾನ ಮಾಡಿದರು. `ಏನಾಯಿತು?’ ಎಂದು ಉಲ್ಲಾಸ ಕಲ್ಸಿ ಪ್ರಶ್ನಿಸಿದಾಗ ಅನಂತ ನಾಯ್ಕ ಅವರು ಕಿರಣ ನಾಯ್ಕ ಬೆನ್ನಟ್ಟಿ ಬರುತ್ತಿರುವುದನ್ನು ಕಾಣಿಸಿದರು. ಜೊತೆಗೆ ಹೊಟೇಲಿನಲ್ಲಿ ನಡೆದ ಘಟನಾವಳಿಗಳ ಬಗ್ಗೆ ವಿವರ ನೀಡಿದರು. ತಕ್ಷಣ ಉಲ್ಲಾಸ ಕಲ್ಸಿ ಅವರು ಅನಂತ ನಾಯ್ಕ ಅವರನ್ನು ಪಿಎಸ್ಐ ಇದ್ದಲ್ಲಿ ಕರೆದೊಯ್ದರು. ಇದಕ್ಕೆ ಅಡ್ಡಿಪಡಿಸಿದ ಕಿರಣ ನಾಯ್ಕ `ನನ್ನ ಮೇಲೆ ಎಫ್ಐಆರ್ ಮಾಡುತ್ತೀರಾ? ಎಂದು ಪೊಲೀಸರನ್ನು ಪ್ರಶ್ನಿಸಿದರು.
ಪೊಲೀಸ್ ಸಿಬ್ಬಂದಿ ವಿರುದ್ಧ ಕೂಗಾಡಿದ ಕಿರಣ ನಾಯ್ಕ ಸಹಾಯಕ ಪೊಲೀಸ್ ನಿರೀಕ್ಷಕ ಉಲ್ಲಾಸ ಕಲ್ಸಿ ಅವರ ಎದೆಗೆ ಕೈ ಹಾಕಿದರು. ಅವರನ್ನು ಹಿಡಿದು ಎಳೆದಾಡಿದರು. ಜೊತೆಗೆ ಬೈಗುಳಗಳ ಸುರಿಮಳೆ ಸುರಿಸಿದರು. ಪೊಲೀಸ್ ಸಿಬ್ಬಂದಿಯನ್ನು ದೂಡಿ ಅವರ ಕೆಲಸಕ್ಕೆ ಅಡ್ಡಿ ಮಾಡಿದರು. ಈ ಎಲ್ಲಾ ಹಿನ್ನಲೆ ಅನಂತ ನಾಯ್ಕ ಅವರು ತಮಗಾದ ಅನ್ಯಾಯದ ಬಗ್ಗೆ ಪೊಲೀಸ್ ದೂರು ನೀಡಿದರು. ದೂರುದಾರನ ಅಳಲು ಆಲಿಸಿದ ಕಾರಣ ತಾವು ಅನುಭವಿಸಿದ ಹಿಂಸೆಯ ಬಗ್ಗೆಯೂ ಪೊಲೀಸ್ ಸಿಬ್ಬಂದಿ ಉಲ್ಲಾಸ ಕಲ್ಸಿ ಮೇಲಧಿಕಾರಿಗಳಿಗೆ ದೂರಿದರು.
ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಕಿರಣ ನಾಯ್ಕ ವಿರುದ್ಧ ಒಂದೇ ದಿನ ಎರಡು ಪ್ರಕರಣ ದಾಖಲಾಗಿದ್ದು, ಪೊಲೀಸರು ಅದರ ವಿಚಾರಣೆ ನಡೆಸಿದರು.
