ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕೊಳಚೆ ಚರಂಡಿಗಳೆಲ್ಲವೂ ತುಂಬಿದ್ದು, ಇದನ್ನು ಅರಿಯದೇ ಕೊಳಚೆಗೆ ಬಿದ್ದ 3 ವರ್ಷದ ಮಗು ಸಾವನಪ್ಪಿದೆ. ಹಳಿಯಾಳದ ಸುಲೇಮಾನ್ ಸಯ್ಯದ್ ಸಾವನಪ್ಪಿದ ಮಗು.
ಹಳಿಯಾಳದ ಒಳಗಿನ ಗುತ್ತಿಗೇರಿ ಗಲ್ಲಿಯಲ್ಲಿ 27 ವರ್ಷದ ಯುನುಸ್ ಸಯ್ಯದ್ ಪೇಂಟಿAಗ್ ಕೆಲಸ ಮಾಡಿಕೊಂಡಿದ್ದರು. ಅವರ 3 ವರ್ಷದ ಮಗು ಮನೆಯಲ್ಲಿದ್ದು, ಜುಲೈ 28ರ ಮಧ್ಯಾಹ್ನ 3ಗಂಟೆ ಆಸುಪಾಸಿನಲ್ಲಿ ಕೊನೆಯದಾಗಿ ಮಗುವಿನ ಜೊತೆ ಆಟವಾಡಿದ್ದರು. ಮನೆ ಆಸುಪಾಸು ಆಟವಾಡುತ್ತಿದ್ದ ಮಗು ಕಣ್ಮರೆಯಾಗಿದ್ದು, ಕುಟುಂಬದ ಎಲ್ಲರೂ ಹುಡುಕಾಟ ನಡೆಸಿದರು.
ಯುನುಸ್ ಸಯ್ಯದ್ ಅವರ ಮನೆ ಹಿಂದೆ ಚರಂಡಿ ಹಾದು ಹೋಗಿದೆ. ಆ ಚರಂಡಿಯಲ್ಲಿ ಗುಂಡಿಯೊAದು ನಿರ್ಮಾಣವಾಗಿದೆ. ಆಟವಾಡುತ್ತಿದ್ದ ಮಗು ಅಲ್ಲಿ ತೆರಳಿದಾಗ ಕಾಲು ಜಾರಿ ಚರಂಡಿಗೆ ಬಿದ್ದಿದೆ. ರಭಸವಾಗಿ ಹರಿಯುತ್ತಿದ್ದ ನೀರಿನಲ್ಲಿ ಮಗು ಕೊಚ್ಚಿ ಹೋಗಿದ್ದು, ಗುಂಡಿಯಲ್ಲಿ ಸಿಲುಕಿ ಅಲ್ಲಿಯೇ ಸಾವನಪ್ಪಿದೆ.
ಕುಟುಂಬದವರು ಸಾಕಷ್ಟು ಹುಡುಕಾಟ ನಡೆಸಿದ ನಂತರ ಕೊಳಚೆ ಗುಂಡಿಯಲ್ಲಿ ಮಗುವಿನ ಶವ ಸಿಕ್ಕಿತು. ತಕ್ಷಣ ಮಗುವನ್ನು ಹಳಿಯಾಳ ತಾಲೂಕಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈಗಾಗಲೇ ಮಗು ಸಾವನಪ್ಪಿದ್ದರಿಂದ ವೈದ್ಯರು ಅಸಹಾಯಕರಾದರು. ನಡೆದ ದುರಂತದ ಬಗ್ಗೆ ಯುನುಸ್ ಸಯ್ಯದ್ ಹಳಿಯಾಳ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದರು.
