ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಐ ಮಹಾಂತೇಶ್ ವಾಲ್ಮೀಕಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಗರಂ ಆಗಿದ್ದಾರೆ. ಪಿಎಸ್ಐ ವಿರುದ್ಧ ಹಲವು ಆರೋಪ ಮಾಡಿರುವ ಕರವೇ ಕಾರ್ಯಕರ್ತರು ಈ ಬಗ್ಗೆ ಪೊಲೀಸ್ ಅಧೀಕ್ಷಕ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.
ಮಹಾಂತೇಶ ವಾಲ್ಮೀಕಿ ಅವರು ಸರಿಸುಮಾರು ಎರಡು ವರ್ಷಗಳಿಂದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಅಮಾಯಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂಬುದು ಕರವೇ ಜಿಲ್ಲಾಧ್ಯಕ್ಷ ಅಕ್ಷಯ್ ಎಸ್ ಬಿ ಅವರ ದೂರು. `ಈ ಹಿಂದೆ ದಿಲೀಪ ಗಜಣಕರ್ ಎಂಬಾತರನ್ನು ಮಹಾಂತೇಶ ವಾಲ್ಮೀಕಿ ಅವರು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು. ಜುಲೈ 26ರಂದು ಸಹ ಪೊಲೀಸರು ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆದೊಯ್ದು ಬೆದರಿಸಿದ್ದಾರೆ’ ಎಂದು ಅಕ್ಷಯ ಎಸ್ ಬಿ ದೂರಿದ್ದಾರೆ.
ಇದರೊಂದಿಗೆ `ದುರ್ಗಾಮಾತಾ ಕೋ ಆಪರೇಟಿವ್ ಬ್ಯಾಂಕಿನ ಲಿಂಗರಾಜ ಕಲ್ಗುಟಕರ್ ಅವರ ಮೇಲೆಯೂ ಪಿಎಸ್ಐ ಹಲ್ಲೆ ನಡೆಸಿದ್ದರು. ಅವರ ಕಾರನ್ನು ಅನಧಿಕೃತವಾಗಿ ಕೊಂಡೊಯ್ದಿದ್ದು, ಆ ಬಗ್ಗೆಯೂ ದೂರು ನೀಡಲಾಗಿದೆ. ಆದರೆ, ಪಿಎಸ್ಐ ಪ್ರಭಾವಿಯಾಗಿರುವ ಕಾರಣ ಕಾನೂನು ಕ್ರಮವಾಗಿಲ್ಲ’ ಎಂದು ಅವರು ಲಿಖಿತವಾಗಿ ದೂರಿದ್ದಾರೆ. `ಅಮಾಯಕರನ್ನು ಠಾಣೆಗೆ ಕರೆಯಿಸಿ ಅವರ ವಿರುದ್ಧ ಡ್ರಿಂಕ್ & ಡ್ರೆವ್ ಕೇಸ್ ಹಾಕುವುದಾಗಿ ಬೆದರಿಸಿದ ವಿಡಿಯೋಗಳಿವೆ’ ಎಂದಿದ್ದಾರೆ.
`ಪಿಎಸ್ಐ ಮಹಾಂತೇಶ ವಾಲ್ಮಿಕಿ ಅವರು ಅಕ್ರಮ ಮರಳುಗಾರಿಕೆ, ಅಕ್ರಮ ಮದ್ಯ ಮಾರಾಟ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ವಿಡಿಯೋಸಹಿತ ಕೆಲ ದಾಖಲೆಗಳಿದ್ದು, ಅದನ್ನು ದೂರಿನ ಜೊತೆ ಸಲ್ಲಿಸುತ್ತಿದ್ದೇವೆ’ ಎಂದು ಕರವೇ ಕಾರ್ಯಕರ್ತರು ವಿವರಿಸಿದ್ದಾರೆ.
`ಮೇಲಧಿಕಾರಿಗಳ ಹೆಸರಿನಲ್ಲಿಯೂ ಪಿಎಸ್ಐ ದುಬಾರಿ ಬೆಲೆಯ ಮದ್ಯದ ಬಾಟಲಿಯನ್ನು ಲಂಚವಾಗಿ ಸ್ವೀಕರಿಸಿದ್ದಾರೆ. ಪೊಲೀಸ್ ಅಧೀಕ್ಷಕರ ಬೀಳ್ಕೊಡುಗೆಗೆ ಉಡುಗರೆ ಕೊಡುವಂತೆ ಅವರು ಅಕ್ರಮ ಮದ್ಯ ಮಾರಾಟಗಾರರಲ್ಲಿ ಬೇಡಿಕೆಯಿಟ್ಟಿದ್ದು, ತಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಅನಗತ್ಯ ತೊಂದರೆ ಕೊಡುವುದಾಗಿ ಬೆದರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
`ತಾವು ಒದಗಿಸಿರುವ ದಾಖಲೆ ಹಾಗೂ ದೂರನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆಯ ಗೌರವ ಕಾಪಾಡುವನಿಟ್ಟಿನಲ್ಲಿ ಪಿಎಸ್ಐ ಮಹಾಂತೇಶ ವಾಲ್ಮೀಕಿ ಅವರ ಅಮಾನತು ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
ಕರವೇ ಕಾರ್ಯಕರ್ತರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..
