ಅಂಕೋಲಾ-ಯಲ್ಲಾಪುರ ಗಡಿಭಾಗವಾದ ಗುಳ್ಳಾಪುರದ ಬಳಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಸೇತುವೆ ನಿರ್ಮಾಣದ ಬಗ್ಗೆ ಯಲ್ಲಾಪುರ ಕ್ಷೇತ್ರ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿದ್ದಾರೆ. ಆ ಮೂಲಕ `ಮುಖ್ಯಮಂತ್ರಿ ಬಂದರೂ ಸೇತುವೆ ಕಟ್ಟುವ ಕೆಲಸ ನಡೆದಿಲ್ಲ’ ಎನ್ನುವವರಿಗೆ ಶಿವರಾಮ ಹೆಬ್ಬಾರ್ ಸಮಾಧಾನ ಮಾಡಿದ್ದಾರೆ.
2021ರಲ್ಲಿ ಸುರಿದ ಭಾರೀ ಪ್ರಮಾಣದ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿಯಿತು. ಅದರ ಪರಿಣಾಮ ಗುಳ್ಳಾಪುರದಿಂದ ಹೆಗ್ಗಾರ್-ಶೇವ್ಕಾರ್-ಹಳ್ಳವಳ್ಳಿ ಸೇರಿ ವಿವಿಧ ಊರುಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಯಿತು. ಮುಖ್ಯಮಂತ್ರಿಯೇ ಬಂದು ಪ್ರವಾಹ ಪರಿಸ್ಥಿತಿ ಗಮನಿಸಿದರೂ ಸೇತುವೆ ಭಾಗ್ಯ ಮಾತ್ರ ಸಿಕ್ಕಿರಲಿಲ್ಲ. `ಇದೀಗ ಗುಳ್ಳಾಪುರದಲ್ಲಿ ಸೇತುವೆ ನಿರ್ಮಾಣದ ಕೆಲಸಕ್ಕೆ ಸರ್ಕಾರ ಶೀಘ್ರದಲ್ಲಿಯೇ ಅನುಮೋದನೆ ನೀಡುವ ಸಾಧ್ಯತೆಯಿದೆ’ ಎಂದು ಶಿವರಾಮ ಹೆಬ್ಬಾರ್ ಹೇಳಿದ್ದಾರೆ.
ಸೇತುವೆ ಕೊಚ್ಚಿ ಹೋದ ನಂತರ ಜನ ತಾತ್ಕಾಲಿಕವಾಗಿ ಸೇತುವೆ ಮಾಡಿಕೊಂಡಿದ್ದರು. ಪ್ರತಿ ವರ್ಷ ಮಳೆಗಾಲದಲ್ಲಿ ಆ ಸೇತುವೆ ಮುಳುಗುತ್ತಿತ್ತು. ಇದರಿಂದ ಮಳೆಗಾಲದ ಅವಧಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ಸಂಚಕಾರ ಉಂಟಾಗಿದ್ದು, ತುರ್ತು ಸೇವೆಗಳಿಗೆ ಸಹ ಜನ ತೊಂದರೆ ಅನುಭವಿಸುತ್ತಿದ್ದರು.
ಈ ಎಲ್ಲಾ ವಿಷಯಗಳ ಬಗ್ಗೆ ಕಾರವಾರ ಕ್ಷೇತ್ರ ಶಾಸಕ ಸತೀಶ್ ಸೈಲ್ ಬಳಿ ಶಿವರಾಮ ಹೆಬ್ಬಾರ್ ಚರ್ಚಿಸಿದ್ದರು. ಅಂಕೋಲಾ ಹಾಗೂ ಯಲ್ಲಾಪುರ ಕ್ಷೇತ್ರದ ಜನರ ಅನುಕೂಲಕ್ಕಾಗಿ ಅಲ್ಲಿ ಹೊಸ ಸೇತುವೆ ನಿರ್ಮಿಸಬೇಕು ಎಂದು ಶಿವರಾಮ ಹೆಬ್ಬಾರ್ ಜೊತೆ ಸತೀಶ್ ಸೈಲ್ ಸಹ ಪಟ್ಟುಹಿಡಿದಿದ್ದರು. ಇದರ ಪರಿಣಾಮ ಸರ್ಕಾರದ ಹಂತದಲ್ಲಿ ಎಲ್ಲಾ ಬಗೆಯ ಕಾಗದಪತ್ರಗಳ ವ್ಯವಹಾರ ನಡೆದಿದ್ದು, ಸೇತುವೆ ನಿರ್ಮಾಣದ ಬಗ್ಗೆ ಸರ್ಕಾರದ ಅಧಿಕೃತ ಪ್ರಕಟಣೆ ಮಾತ್ರ ಬಾಕಿಯಿದೆ.
