ಶಿರಸಿ-ಹಾವೇರಿ ರಸ್ತೆ ಕಾಮಗಾರಿ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಹೋರಾಟದ ಬೆದರಿಕೆ ನೀಡಿದ್ದು, ಇದಕ್ಕೆ ಬಗ್ಗಿದ ಗುತ್ತಿಗೆ ಕಂಪನಿ ರಾಜಿ-ಸಂದಾನದ ಮಾತುಕಥೆ ನಡೆಸಿದೆ. ಅಮ್ಮಾಪುರ ಕನ್ಸ್ಟ್ರಕ್ಷನ್’ನ ಪ್ರತಿನಿಧಿಗಳು ಅನಂತಮೂರ್ತಿ ಹೆಗಡೆ ಅವರ ಜೊತೆ ಸ್ಥಳೀಯರನ್ನು ಸೇರಿಸಿ ಸಮನ್ವಯ ಸಭೆ ಮಾಡಿದ್ದಾರೆ.
ಹೆದ್ದಾರಿ ಹೊಂಡದಿoದ ಸಾರ್ವಜನಿಕರಿಗೆ ಆಗುವ ಸಮಸ್ಯೆಗಳ ಬಗ್ಗೆ ಮೊದಲು ಅನಂತಮೂರ್ತಿ ಹೆಗಡೆ ಕಂಪನಿಯವರ ಗಮನಕ್ಕೆ ತಂದಿದ್ದರು. ಅರಣ್ಯ ಇಲಾಖೆ ತಕರಾರು ಇರುವ ಬಗ್ಗೆ ಕಂಪನಿ ನೆಪ ಹೇಳಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅದನ್ನು ಸರಿಪಡಿಸಿದ್ದರು. ಅದಾದ ನಂತರ `ಶಿರಸಿ – ಹಾವೇರಿ ರಸ್ತೆಯಲ್ಲಿನ ಹೊಂಡ ಮುಚ್ಚದೇ ಇದ್ದರೆ ನ್ಯಾಯಾಲಯದ ಮೊರೆ ಹೋಗುವೆ’ ಎಂದು ಅನಂತಮೂರ್ತಿ ಹೆಗಡೆ ಎಚ್ಚರಿಸಿದ್ದರು. ಈ ಹಿನ್ನಲೆ ಬುಧವಾರ ಅಮ್ಮಾಪುರ ಕನ್ಸ್ಟ್ರಕ್ಷನ್ ಪ್ರತಿನಿಧಿಗಳು ರಾಜಿ ಮಾತುಕಥೆಗೆ ಮುಂದಾದರು.
ಬಿಸಲಕೊಪ್ಪದಲ್ಲಿ ಸಭೆ ಸೇರಿದ ಎಲ್ಲರೂ ಕಂಪನಿ ವಿರುದ್ಧ ಕಿಡಿಕಾರಿದರು. `ಈ ರಸ್ತೆಯಲ್ಲಿನ ಹೊಂಡಗಳಿAದಾಗಿ ಸಾರ್ವಜನಿಕರ ಓಡಾಟ ಕಷ್ಟವಾಗಿದೆ. ಕೂಡಲೇ ರಸ್ತೆಯಲ್ಲಿನ ಎಲ್ಲಾ ಗುಂಡಿಗಳನ್ನು ಮುಚ್ಚಬೇಕು’ ಎಂದು ತಾಕೀತು ಮಾಡಿದರು. `ಗುರುವಾರದಿಂದಲೇ ಗುಂಡಿ ಮುಚ್ಚುವ ಕೆಲಸ ಶುರು ಮಾಡುವೆವು’ ಎಂದು ಕಂಪನಿಯವರು ಭರವಸೆ ನೀಡಿದರು.
`ವೆಟ್ ಮಿಕ್ಸ್ ಮತ್ತು ಜಲ್ಲಿ ಹಾಕಿ ಮುಚ್ಚುತ್ತೇವೆ. ಜನರ ಓಡಾಟಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಕಂಪನಿಯವರು ಅಲ್ಲಿದ್ದ ಶ್ರೀನಿವಾಸ ಹೆಬ್ಬಾರ್, ರಮೇಶ ನಾಯ್ಕ ಕುಪ್ಪಳ್ಳಿ, ಉಷಾ ಹೆಗಡೆ, ಮಹೇಂದ್ರ ಸಾಲೇಕೊಪ್ಪ, ನವೀನ ಶೆಟ್ಟಿ, ವಿ ಎಂ ಹೆಗಡೆ, ವಿದ್ಯಾಧರ ಬಿಸಲಕೊಪ್ಪ, ಜಿ.ಕೆ.ಹೆಗಡೆ ಬಿಸಲಕೊಪ್ಪ ಅವರ ಬಳಿ ವಾಗ್ದಾನ ಮಾಡಿದರು.
