ಯಲ್ಲಾಪುರ ಬಸ್ ನಿಲ್ದಾಣ ಸುತ್ತ ಎಲ್ಲೆಂದರಲ್ಲಿ ತ್ಯಾಜ್ಯ-ಮರದ ಟೊಂಗೆ ಬಿದ್ದುಕೊಂಡಿದ್ದು, ಇಲ್ಲಿನ ಅಶುಚಿತ್ವದ ವಿರುದ್ಧ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
`ಬಸ್ ನಿಲ್ದಾಣದ ಬಳಿ ಮರದ ಟೊಂಗೆ ಕಡಿದು ರಾಶಿ ಹಾಕಲಾಗಿದೆ. ಇಲ್ಲಿ ಹಂದಿಗಳು ಆಗಮಿಸಿ ಗಲೀಜು ಮಾಡುತ್ತಿದೆ. ಅಲ್ಲಿನ ಮಾಲಿನ್ಯದಿಂದ ಸೊಳ್ಳೆಗಳ ಉತ್ಪಾದನೆ ಹೆಚ್ಚಾಗಿದ್ದು, ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗ್ರಿಸ್ ದೂರಿದ್ದಾರೆ.
`ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಬಸ್ ನಿಲ್ದಾಣದಲ್ಲಿ ಕೇಳಿದಾಗ ಲೋಕೋಪಯೋಗಿ ಇಲಾಖೆಯವರನ್ನು ಪ್ರಶ್ನಿಸುವಂತೆ ಹೇಳುತ್ತಾರೆ. ಲೋಕೋಪಯೋಗಿ ಇಲಾಖೆಗೆ ಕೇಳಿದರೆ ಅರಣ್ಯ ಇಲಾಖೆಯ ಕಡೆ ಕಾಣಿಸುತ್ತಾರೆ. ಅರಣ್ಯ ಇಲಾಖೆಯವರನ್ನು ಕೇಳಿದಾಗ ಶುಚಿತ್ವ ಕಾಪಾಡುವುದು ಪಟ್ಟಣ ಪಂಚಾಯತ ಹೊಣೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ದೂರಿದರು.
`ಯಲ್ಲಾಪುರ ಬಸ್ ನಿಲ್ದಾಣಕ್ಕೆ ರಾಜ್ಯದ ನಾನಾ ಭಾಗಗಳಿಂದ ಪ್ರಯಾಣಿಕರು ಬರುತ್ತಾರೆ. ಅವರು ಮೂಗು ಮುಚ್ಚಿಕೊಂಡು ಓಡಾಡಬೇಕಿದ್ದ ಸ್ಥಿತಿಯಿದ್ದು, ಕೂಡಲೇ ಆ ಪ್ರದೇಶ ಸ್ವಚ್ಛಗೊಳಿಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಆಗ್ರಹಿಸಿದರು.
