ಎರಡು ತಿಂಗಳ ನಿಷೇಧದ ನಂತರ ಶುಕ್ರವಾರ ಯಾಂತ್ರಿಕೃತ ದೋಣಿಗಳು ಕಡಲಿಗೆ ಇಳಿದಿದ್ದು, ಮೊದಲ ದಿನವೇ ಕಾರವಾರದ ಬೈತಕೋಲದಲ್ಲಿ ಬೋಟಿನಲ್ಲಿ ಅಗ್ನಿ ಅವಘಡ ನಡೆದಿದೆ.
ಮೀನುಗಾರಿಕೆ ಮುಗಿಸಿ ಬೈತಖೋಲದ ಬಂದರಿಗೆ ಬಂದಿದ್ದ ದೋಣಿಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದೆ. ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ ಕಾರ್ಮಿಕರ ಸಮಯ ಪ್ರಜ್ಞೆಯಿಂದ ಭಾರೀ ಪ್ರಮಾಣದ ಅನಾಹುತ ತಪ್ಪಿದೆ.
ಶ್ರೀಲಕ್ಷ್ಮಿ ಹೆಸರಿನ ಬೋಟು ಶುಕ್ರವಾರ ಮೀನುಗಾರಿಕೆಗೆ ತೆರಳಿತ್ತು. ಸಂಜೆ ಮೀನು ಬೇಟೆ ಮುಗಿಸಿ ಬೈತಖೋಲ್ ಬಂದರಿಗೆ ಬಂದಿತ್ತು. ಈ ವೇಳೆ ಬೋಟಿನ ಕಾರ್ಮಿಕರಿಗಾಗಿ ಬೋಟಿನ ಒಳಗೆ ಅಡುಗೆ ಮಾಡಲಾಗಿದ್ದು, ಶಿಖಾರಿಯಾದ ಮೀನುಗಳನ್ನು ಖಾಲಿ ಮಾಡುವ ವೇಳೆ ಅಡುಗೆ ಅನಿಲ ಸೋರಿಕೆಯಾಯಿತು. ಅಡುಗೆ ಮಾಡುತ್ತಿದ್ದ ಬೆಂಕಿ ಇಡೀ ಬೋಟನ್ನು ಆವರಿಸಿತು.
ಕ್ಷಣ ಮಾತ್ರದಲ್ಲಿ ಬೆಂಕಿಯ ಜ್ವಾಲೆ ದೊಡ್ಡದಾಯಿತು. ಅಲ್ಲಿದ್ದ ಮೀನುಗಾರರು ಹಾಗೂ ಕಾರ್ಮಿಕರು ಇದರಿಂದ ಭಯಗೊಂಡರು. ಕೆಲವರು ಅಲ್ಲಿಂದ ಓಡಲು ಶುರು ಮಾಡಿದರು. ಸಿಲೆಂಡರ್ ಬಳಿಯಿದ್ದ ಮೀನುಗಾರಿಕಾ ಬಲೆ ಸಹ ಸುಟ್ಟಿತು. ಈ ವೇಳೆ ಅಲ್ಲಿದ್ದ ಕೆಲವರು ಒದ್ದೆ ಗೋಣಿಚೀಲವನ್ನು ಸಿಲೆಂಡರ್’ಗೆ ಹಾಕಿದರು. ಆದರೂ ಬೆಂಕಿ ಕಡಿಮೆ ಆಗಲಿಲ್ಲ.
ಕೊನೆಗೆ ಬೋಟ್ ಮಾಲಕ ಸಿಲೆಂಡರನ್ನು ಸಮುದ್ರಕ್ಕೆ ಎಸೆದಿದ್ದು, ಬೆಂಕಿ ಇನ್ನಷ್ಟು ದೊಡ್ಡದಾಗಿ ಕ್ರಮೇಣ ಕಡಿಮೆಯಾಯಿತು. ಮೀನುಗಾರರು ನಿಟ್ಟುಸಿರು ಬಿಟ್ಟರು.
