ಸರ್ಕಾರದ ಪರವಾನಿಗೆ ಇಲ್ಲದೇ ಗೂಡಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವಾಸುದೇವ್ ನಾಯ್ಕ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆ ಮದ್ಯ ಪೂರೈಸಿದ ಬಾರ್ & ರೆಸ್ಟೊರೆಂಟ್ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಅಂಕೋಲಾ ಅವರ್ಸಾ ಸಕಲಬೇಣದ ವಾಸುದೇವ ನಾಯ್ಕ ಗೂಡಂಗಡಿ ವ್ಯಾಪಾರ ಮಾಡಿಕೊಂಡಿದ್ದರು. ಅತಿಯಾದ ಆಸೆಗೆ ಬಿದ್ದ ಅವರು ಅಕ್ರಮವಾಗಿ ಮದ್ಯ ಮಾರಾಟದ ಬಗ್ಗೆ ಯೋಚಿಸಿದರು. ಅದರಂತೆ ಬಾಳೆಗುಳಿ ಕ್ರಾಸಿನಲ್ಲಿರುವ ವರದರಾಜ್ ಬಾರ್ & ರೆಸ್ಟೊರೆಂಟ್’ಗೆ ಹೋಗಿ ತಮ್ಮ ಮನದ ಬಯಕೆ ಹೇಳಿದರು. `ನಾಲ್ಕು ಕಾಸು ಸಂಪಾದಿಸಲು ಸಹಾಯ ಮಾಡಿ’ ಎಂದು ಅಂಗಲಾಚಿದರು.
ವರದರಾಜ್ ಬಾರ್ & ರೆಸ್ಟೊರೆಂಟ್ ಮಾಲಕರಿಗೂ ತಮ್ಮ ಮಳಿಗೆಯಲ್ಲಿದ್ದ ಮದ್ಯ ಮಾರಾಟಗಾವಬೇಕಿತ್ತು. ಹೀಗಾಗಿ ವಾಸುದೇವ್ ನಾಯ್ಕ ಅಕ್ರಮ ಮದ್ಯ ಮಾರಾಟ ಮಾಡುತ್ತಾರೆ ಎಂಬ ಅರಿವಿದ್ದರೂ ಅಗತ್ಯವಿರುವುಷ್ಟು ಮದ್ಯ ಪೂರೈಸಿದರು. ಅಗಸ್ಟ 1ರ ರಾತ್ರಿ ಹಟ್ಟಿಕೇರಿ ಪಾರೇಸ್ಟ್ ಕಟ್ಟಿಗೆ ಡಿಪೋ ಬಳಿ ಗುಳೆ ರಸ್ತೆ ಹತ್ತಿರ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ವಾಸುದೇವ್ ನಾಯ್ಕ ಅವರನ್ನು ಪೊಲೀಸರು ಹಿಡಿದರು.
ವಿಚಾರಣೆ ವೇಳೆ ವಾಸುದೇವ್ ನಾಯ್ಕ ಅವರು ವರದರಾಜ್ ಬಾರ್ & ರೆಸ್ಟೊರೆಂಟ್ ಮಾಲಕರು ನೀಡಿದ ಸಹಕಾರದ ಬಗ್ಗೆ ಬಾಯ್ಬಿಟ್ಟರು. 3360ರೂ ಮೌಲ್ಯದ ಮದ್ಯ ವಶಕ್ಕೆಪಡೆದ ಪಿಎಸ್ಐ ಸುನೀಲ ಹುಲ್ಲೊಳ್ಳಿ ವಾಸುದೇವ ನಾಯ್ಕರ ಜೊತೆ ಅಕ್ರಮ ಮದ್ಯ ಮಾರಾಟಕ್ಕೆ ಪ್ರಚೋದನೆ ನೀಡಿದ ವರದರಾಜ್ ಬಾರ್ & ರೆಸ್ಟೊರೆಂಟ್ ಮಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದರು.
