`ದುಡಿಯಲು ಆಗುತ್ತಿಲ್ಲ. ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿ ಇಲ್ಲ’ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ. ಅರೆಬರೆ ಸುಟ್ಟು ಆಸ್ಪತ್ರೆಗೆ ದಾಖಲಾಗಿದ್ದ ಯಲ್ಲಾಪುರದ ಲಕ್ಷ್ಮೀ ಸಿದ್ದಿ ನಿನ್ನೆ ರಾತ್ರಿ ಸಾವನಪ್ಪಿದ್ದಾರೆ.
ಯಲ್ಲಾಪುರದ ಆನಗೋಡಿನ ಬೆಳ್ತಾರಗದ್ದೆಯಲ್ಲಿ ಲಕ್ಷ್ಮೀ ಸಿದ್ದಿ (48)ವಾಸವಾಗಿದ್ದರು. ಮಹಾದೇವಿ ಸಿದ್ದಿ ಎಂದು ಗುರುತಿಸಿಕೊಂಡಿದ್ದ ಅವರು ಪತಿ ನಾಗೇಶ ಸಿದ್ದಿ ಅವರಿಂದ ದೂರವುಳಿದಿದ್ದರು. ಸೈಮನ್ ಎಂಬಾತರ ಜೊತೆ ಸೇರಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ, `ಈಚೆಗೆ ದುಡಿಯಲು ಶಕ್ತಿಯಿಲ್ಲ. ಹೀಗಾಗಿ ಊಟಕ್ಕೆ ನಿನ್ನ ಮನೆಗೆ ಬಂದು ತೊಂದರೆ ಕೊಡುತ್ತಿದ್ದೇವೆ’ ಎಂದು ಪುತ್ರಿ ಮಂಗಲಾ ಸಿದ್ದಿ ಅವರಲ್ಲಿ ಹೇಳಿಕೊಂಡಿದ್ದರು.
`ಅಡುಗೆ ಮಾಡಲು ಮನೆಯಲ್ಲಿ ಸಾಮಗ್ರಿ ಇಲ್ಲ’ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಲಕ್ಷ್ಮೀ ಸಿದ್ದಿ ಅವರನ್ನು ಇಡಗುಂದಿಯ ಗಂಜೆಕುಮಾರಿ ಬಳಿಯಿರುವ ಮಂಗಲಾ ಸಿದ್ದಿ ಅವರು ಸಮಾಧಾನ ಮಾಡಿದ್ದರು. ಆದರೂ, ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಹೊಂದಿದ ಅವರು ಅಗಷ್ಟ 2ರಂದು ಚಿಮಣ್ಣಿ ಹಚ್ಚಲು ತಂದ ಡಿಸೇಲ್’ನ್ನು ಮೈಮೇಲೆ ಸುರಿದುಕೊಂಡರು. ಬೆಂಕಿ ಹಚ್ಚಿಕೊಂಡು ಉರಿಯುತ್ತಿದ್ದ ಲಕ್ಷ್ಮೀ ಸಿದ್ದಿ ಅವರನ್ನು ಕೆಲವರು ಯಲ್ಲಾಪುರ ಆಸ್ಪತ್ರೆಗೆ ದಾಖಲಿಸಿದ್ದರು.
ನಂತರ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್’ಗೆ ಸೇರಿಸಲಾಯಿತು. ಅರೆ ಬೆಂದ ದೇಹದಲ್ಲಿ ನರಳಾಟ ನಡೆಸಿದ ಲಕ್ಷ್ಮೀ ಸಿದ್ದಿ ಅವರು ಅಗಷ್ಟ 5ರ ರಾತ್ರಿ 12ಗಂಟೆಗೆ ಕೊನೆಯುಸಿರೆಳೆದರು. ಈ ಬಗ್ಗೆ ಮಂಗಲಾ ಸಿದ್ದಿ ಅವರು ಯಲ್ಲಾಪುರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.
